ಶಿರಸಿ: ಕಳೆದ ಜು.26 ಕ್ಕೆ ಬಸವರಾಜ ಬೊಮ್ಮಾಯಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಸಂದಿದೆ. ಆದರೆ, ಒಂದು ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಮಾರನೇ ದಿನವೇ ಉತ್ತರ ಕನ್ನಡ ಜಿಲ್ಲೆಗೆ ಘೋಷಿಸಿದ್ದ ಅನುದಾನದಲ್ಲಿ ವಿವಿಧ ಗುತ್ತಿಗೆದಾರರಿಗೆ ಬರೋಬ್ಬರಿ 80 ಕೋಟಿ ರೂ. ಪಾವತಿಸಲು ಬಾಕಿಯಿದ್ದು, ಕೆಲಸ ಮುಗಿದರೂ ಹಣ ನೀಡದಿರುವುದು ಗುತ್ತಿಗೆದಾರರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ. ಅಲ್ಲದೇ ಇದರಿಂದ ಈ ಬಾರಿಯ ಅತಿವೃಷ್ಟಿ ಕಾಮಗಾರಿ ಅಡಿ ಹಲವು ರಸ್ತೆಗಳು ಅಭಿವೃದ್ಧಿ ಆಗಬೇಕಿದ್ದು, ಇದೂ ನೆನೆಗುದಿಗೆ ಬೀಳುವ ಆತಂಕ ಎದುದರಾಗಿದೆ.
2021ರಲ್ಲಿ ಸುರಿದ ಬಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾವಿರಾರು ಕೋಟಿ ರೂ. ಹಾನಿಯಾಗಿತ್ತು. ರಸ್ತೆ, ಸೇತುವೆಗಳು ನೀರು ಪಾಲಾಗಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ 200 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು. ಆದರೆ, ಕೆಲಸ ಮುಗಿದು ಹಲವು ತಿಂಗಳು ಕಳೆದಿದ್ದರೂ ರಾಜ್ಯ ಸರ್ಕಾರದಿಂದ ಗುತ್ತಿಗೆದಾರರಿಗೆ 80 ಕೋಟಿ ರೂ. ಪಾವತಿಸಲು ಬಾಕಿಯಿದೆ ಎಂದು ಹೇಳಲಾಗಿದೆ.
ಅಲ್ಲದೇ ಇಲ್ಲಿನ ಹಲವು ರಸ್ತೆಗಳು ಈಗಾಗಲೇ ಹಾಳಾಗಿದ್ದು, ಕಳಪೆ ಕಾಮಗಾರಿ ಮಾಡಿರುವ ಆರೋಪವೂ ಕೇಳಿ ಬಂದಿದೆ. ಇದಲ್ಲದೇ ಹಣ ಬಿಡುಗಡೆಗೆ ಶೆ. 40 ರಷ್ಟು ಕಮಿಷನ್ ಆರೋಪವು ಕೇಳಿ ಬಂದಿದೆ. ಕಳಪೆ ರಸ್ತೆಯಿಂದಾಗಿ ಸಾರ್ವಜನಿಕರು ಕಷ್ಟಪಡುವಂತಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ವಕ್ತಾರ ದೀಪಕ್ ದೊಡ್ಡೂರು ಹೇಳಿದ್ದಾರೆ.
ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮಾರನೇ ದಿನವೇ ಜಿಲ್ಲೆಗೆ ಭೇಟಿ ನೀಡಿ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು. ಅವರ ಜೊತೆಗೆ ಕಾರ್ಮಿಕ ಸಚಿವ ಹೆಬ್ಬಾರ್ ಕೂಡ ಇದ್ದರು. ಆದರೆ, ಹಣ ಬಾರದಿರುವ ಕಾರಣ ಸಚಿವರೂ ಏನೂ ಮಾಡುವಂತಿಲ್ಲ. ಆದರೆ, ಸಚಿವರು ಮಾತ್ರ ಇದನ್ನು ಸಮರ್ಥನೆ ಮಾಡಿಕೊಂಡಿದ್ದು, ಹಂತ ಹಂತವಾಗಿ ಹಣ ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ 80 ಕೋಟಿ ರೂ. ನಷ್ಟು ದೊಡ್ಡ ಮೊತ್ತ ಜಿಲ್ಲೆಯ ಗುತ್ತಿಗೆದಾರರಿಗೆ ಪಾವತಿ ಮಾಡಬೇಕಿದ್ದು, ಇನ್ನಷ್ಟು ವಿಳಂಬ ಮಾಡದೇ ಅನುದಾನ ಬಿಡುಗಡೆ ಮಾಡಬೇಕಿದೆ. ಅಲ್ಲದೇ ಕಳಪೆ ಕಾಮಗಾರಿ ತಡೆದು, ಈ ಬಾರಿ ಆಗಬೇಕಾದ ಕೆಲಸವನ್ನೂ ಶೀಘ್ರವಾಗಿ ಮಾಡಬೇಕಿದೆ.
ಇದನ್ನೂ ಓದಿ : ವರ್ಷದ ಬಳಿಕ ಮತ್ತೆ ರಾಜಕೀಯ ಚಟುವಟಿಕೆ ಕೇಂದ್ರವಾದ ಕಾವೇರಿ: ಬಿಎಸ್ವೈ ನಿವಾಸಕ್ಕೆ ದೌಡಾಯಿಸಿದ ಬಿಜೆಪಿ ಮುಖಂಡರು