ಕಾರವಾರ: ಭಟ್ಕಳದಲ್ಲಿ ಕೊರೊನಾ ಕೇಕೆ ಮುಂದುವರಿದಿದೆ. ಇಂದು ಮತ್ತೆ ಏಳು ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 20ಕ್ಕೆ ತಲುಪಿದೆ.
ಶುಕ್ರವಾರ ಒಂದೇ ಕುಟುಂಬದ 10 ಜನ ಸೇರಿದಂತೆ 12 ಜನರಲ್ಲಿ ಪತ್ತೆಯಾಗಿದ್ದ ಸೋಂಕು ಇಂದು ಇಬ್ಬರು ಮಕ್ಕಳು ಸೇರಿ 7 ಮಂದಿಯಲ್ಲಿ ಕಾಣಿಸಿಕೊಂಡಿದೆ. ಇಂದು ಪತ್ತೆಯಾದವರ ಪೈಕಿ 4 ಮಹಿಳೆಯರು ಹಾಗೂ 3 ಪುರುಷರಿದ್ದಾರೆ. ಅದರಲ್ಲಿ 2.6 ತಿಂಗಳ ಹೆಣ್ಣು ಮಗು ಹಾಗೂ 1.5 ತಿಂಗಳ ಗಂಡು ಮಗು ಸೇರಿದ್ದು, 68 ವರ್ಷದ ವೃದ್ಧ , 50 ವರ್ಷದ ಮಹಿಳೆ, 23 ಹಾಗೂ 17 ವರ್ಷದ ಯುವತಿಯಲ್ಲಿ ಸೋಂಕು ಖಚಿತವಾಗಿದೆ.
ಮಲ್ಲಿಗೆ ನಗರಿ ಭಟ್ಕಳದಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಮಂಗಳೂರಿನ ಪಡೀಲ್‌ನಲ್ಲಿರುವ ಫಸ್ಟ್ ನ್ಯೂರೋ ಆಸ್ಪತ್ರೆಯೇ ಮೂಲವಾಗಿದೆ. ಆಸ್ಪತ್ರೆಯ ಸಂಪರ್ಕಕ್ಕೆ ಬಂದ 18 ವರ್ಷದ ಯುವತಿಯಲ್ಲಿ ಸೋಂಕು ದೃಢಪಟ್ಟು ಉತ್ತರಕನ್ನಡ ಜಿಲ್ಲೆಯಲ್ಲಿ 21 ದಿನಗಳ ಬಳಿಕ ಮತ್ತೆ ಪತ್ತೆಯಾಗಿತ್ತು. ಬಳಿಕ ಆಕೆಯ ಕುಟುಂಬಸ್ಥರು ಗೆಳತಿ ಹಾಗೂ ಪಕ್ಕದ ಮನೆಯವರಿಗೆ ತಗುಲಿ ಏಳು ಜನರಲ್ಲಿ ಕಾಣಿಸಿಕೊಂಡಿತ್ತು. ಬಳಿಕ ಜಿಲ್ಲಾಡಳಿತ ಅವರ ಸಂಪರ್ಕಕ್ಕೆ ಬಂದ 60 ಮಂದಿಯ ಗಂಟಲ ದ್ರವ ತಪಾಸಣೆ ನಡೆಸಿದ ಪರಿಣಾಮ ಇಂದು ಮತ್ತೆ 7 ಪ್ರಕರಣಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.