ಕಾರವಾರ (ಉತ್ತರಕನ್ನಡ): ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿ 10 ವರ್ಷ ಕಳೆದರೂ ಇನ್ನೂ ಮುಗಿದಿಲ್ಲ. ಕಾರವಾರ ತಾಲೂಕಿನಲ್ಲಿ ಹೆದ್ದಾರಿ ಅಗಲೀಕರಣ ಸಂದರ್ಭ ನಾಲ್ಕು ಸುರಂಗಗಳನ್ನು ನಿರ್ಮಿಸಿ ಜನರ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಫಿಟ್ನೆಸ್ ಸರ್ಟಿಫಿಕೆಟ್ ಕೊಟ್ಟಿಲ್ಲ ಎಂದು ಮತ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ. ಆದರೆ ಇದೀಗ ಸ್ಥಳೀಯರು ಸುರಂಗ ಬಂದ್ ಮಾಡಿರುವುದನ್ನು ತೆರವು ಮಾಡಲು ಮುಂದಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಿಂದ ಕಾರವಾರದ ಮಾಜಾಳಿ ಗಡಿಯವರೆಗೆ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾರ್ಯ ಮಾಡಲಾಗಿದೆ. ಚತುಷ್ಪಥ ರಸ್ತೆ ಕಾಮಗಾರಿ ಪ್ರಾರಂಭವಾಗಿ ಹತ್ತು ವರ್ಷ ಕಳೆದರೂ ಇನ್ನೂ ಕಾಮಗಾರಿ ಮುಗಿಸಿಲ್ಲ. ಕಾಮಗಾರಿ ಮುಗಿಯದಿದ್ದರೂ ಜನರಿಂದ ದುಬಾರಿ ಟೋಲ್ ಸಂಗ್ರಹ ಮಾಡುತ್ತಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ನಡುವೆ ಕಾರವಾರ ತಾಲೂಕಿನ ಬಿಣಗಾದಿಂದ ಕಾರವಾರ ನಗರ ಪ್ರವೇಶ ಮಾಡಲು ಹೆದ್ದಾರಿಯಲ್ಲಿ ನಾಲ್ಕು ಸುರಂಗಗಳನ್ನು(ಟನಲ್) ನಿರ್ಮಿಸಿ ಜನರ ಓಡಾಟಕ್ಕೆ ಅವಕಾಶವನ್ನು ಮಾಡಿಕೊಡಲಾಗಿತ್ತು.
ಆದರೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಕಾರವಾರ ಶಾಸಕ ಸತೀಶ್ ಸೈಲ್ ಫಿಟ್ ನೆಸ್ ಸರ್ಟಿಫಿಕೆಟ್ ಇಲ್ಲದೇ ಟನಲ್ ಪ್ರಾರಂಭಿಸಿದೆ ಎಂದು ಬಂದ್ ಮಾಡಿಸಿದ್ದರು. ಸುರಂಗ ಮಾರ್ಗದಲ್ಲಿ ಸಾಗಿದರೆ ಮೂರ್ನಾಲ್ಕು ಕಿಲೋ ಮೀಟರ್ ಸಂಚಾರ ಮಾರ್ಗ ಕಡಿಮೆಯಾಗುವುದರಿಂದ ಸಾರ್ವಜನಿಕರು ಮತ್ತೆ ಟನಲ್ ಪ್ರಾರಂಭ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ಇದಕ್ಕೆ ಸಚಿವ ಹಾಗೂ ಶಾಸಕರು ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಹೇಳಲಾಗಿದೆ. ಆದ್ದರಿಂದ ಸೆಪ್ಟೆಂಬರ್ 29 ರಂದು ಸಾರ್ವಜನಿಕ ಪ್ರತಿಭಟನೆ ಮಾಡಿ ಸುರಂಗ ಮಾರ್ಗದಲ್ಲಿ ಓಡಾಟಕ್ಕೆ ನಾವೇ ಅವಕಾಶ ಕಲ್ಪಿಸಿಕೊಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಎಚ್ಚರಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸದ್ಯ ಟೋಲ್ ಸಂಗ್ರಹ ಮುಂದುವರೆದಿದೆ. ಈ ಹಿಂದೆ ಟನಲ್ ಬಂದ್ ಮಾಡುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾರವಾರ ಶಾಸಕ ಸತೀಶ್ ಸೈಲ್ ಟೋಲನ್ನು ಬಂದ್ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಈಗ ಟೋಲ್ ಸಂಗ್ರಹ ಮುಂದುವರೆದಿದೆ. ಟನಲ್ ಬಂದ್ ಮಾಡಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಸುರಂಗ ಮಾರ್ಗ ಸಂಬಂಧ ಒಂದೆರಡು ದಿನದಲ್ಲಿ ಸಭೆಯನ್ನು ನಡೆಸಲಾಗುವುದು. ಸಭೆ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಫಿಟ್ ನೆಸ್ ಸರ್ಟಿಫಿಕೇಟ್ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಮಂಕಾಳ ವೈದ್ಯ ಹಾಗೂ ಸತೀಶ್ ಸೈಲ್ ಟನಲ್ನ್ನು ಬಂದ್ ಮಾಡಿಸಿದ್ದಾರೆ. ಆದರೆ ಎರಡು ತಿಂಗಳ ಹಿಂದೆಯೇ ಖಾಸಗಿ ಕಂಪನಿಯೊಂದು ಪರೀಕ್ಷಿಸಿ ಫಿಟ್ ನೆಸ್ ಸರ್ಟಿಫಿಕೇಟ್ ನೀಡಿದೆ. ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದೆ. ಆದರೆ ಜನಪ್ರತಿನಿಧಿಗಳ ಸ್ವಪ್ರತಿಷ್ಠೆ ಹಿನ್ನೆಲೆ ಟನಲ್ ಬಂದ್ ಮಾಡಿ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ : ಉತ್ತರ ಕರ್ನಾಟಕದ ವಿಶಿಷ್ಟ ಆಚರಣೆ.. ಮನೆ ಮನೆಗೆ ಸಮೃದ್ಧಿ ಹೊತ್ತು ತರುವ ಜೋಕುಮಾರಸ್ವಾಮಿ