ಶಿರಸಿ: ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ನನ್ನ ಕ್ಷೇತ್ರ ಅನಾಥವಾಗಿದೆ ಎಂದು ಕಾಂಗ್ರೆಸ್ ಪಕ್ಷದವರು ಆರೋಪಿಸಿದ್ದರು. ಆದರೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಮೇಲೆ ಯಲ್ಲಾಪುರ ಕ್ಷೇತ್ರಕ್ಕೆ 365 ಕೋಟಿ ರೂ. ಅನುದಾನ ನೀಡಿದೆ ಎಂದು ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪನವರು ರೈತ ಪರ ಹೋರಾಟಗಾರರಾಗಿದ್ದು, ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಹೇಳುವ ಮೂಲಕ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಆರೋಪಕ್ಕೆ ಹೆಬ್ಬಾರ್ ತಿರುಗೇಟು ನೀಡಿದರು.
ಬೃಹತ್ ಯೋಜನೆಗೆ 225 ಕೋಟಿ ಅನುದಾನ:
ಬೇಡ್ತಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಬೃಹತ್ ಯೋಜನೆಗೆ 225 ಕೋಟಿ ರೂ. ಬಿಡುಗಡೆಯಾಗಿದೆ. ಈ ಯೋಜನೆ ಮೂಲಕ ಮುಂಡಗೋಡ ತಾಲೂಕಿನ ಮಳಗಿ, ಪಾಳಾ, ಕಾತೂರು, ಕೋಡಂಬಿ, ಓಣಿಕೇರಿ ಸೇರಿದಂತೆ 5 ಗ್ರಾಮ ಪಂಚಾಯತ್ಗಳಲ್ಲಿ ಬರುವ 84 ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯತ್ ಕೆರೆಗಳಿಗೆ ನೀರು ತುಂಬಿಸಲಾಗುವುದು. ಇದರಿಂದ ಸುಮಾರು 8,292 ಎಕರೆ ಕೃಷಿ ಪ್ರದೇಶಕ್ಕೆ ಅನುಕೂಲವಾಗಿದೆ ಎಂದು ಹೇಳಿದರು.
ಇನ್ನು ಬನವಾಸಿಯ ವರದಾ ನದಿಯಿಂದ ಕೆರೆ ನೀರು ತುಂಬಿಸುವ ಯೋಜನೆ ಸೇರಿ ಮುಂಡಗೋಡು ಬನವಾಸಿ ಭಾಗದ ಒಟ್ಟು 55 ಸಾವಿರ ಎಕರೆ ಕೃಷಿ ಪ್ರದೇಶಕ್ಕೆ ನೀರಾವರಿ ಯೋಜನೆ ರೂಪಿಸಲಾಗಿದೆ. ಇದರಿಂದ ಬರಗಾಲದ ಹಣೆಪಟ್ಟಿ ಕಟ್ಟಿಕೊಂಡಿದ್ದ ಪೂರ್ವ ಭಾಗ ಇನ್ನು ನೀರಾವರಿ ಪ್ರದೇಶ ಆಗಲಿದೆ. ಅತಿವೃಷ್ಟಿಯಿಂದ ಹಾನಿಗೊಳಗಾದ ಕೆರೆಗಳ ಪುನರ್ ನಿರ್ಮಾಣ, ಒಡ್ಡು ನಿರ್ಮಾಣಕ್ಕೆ ಒಟ್ಟು 42.5 ಕೋಟಿ ರೂ., ನಾಲ್ಕು ಸೇತುವೆಗಳ ನಿರ್ಮಾಣಕ್ಕೆ 9.26 ಕೋಟಿ ರೂ., ಅಲ್ಲದೆ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.