ಕಾರವಾರ: ಮಹಾಲಯ ಅಮಾವಾಸ್ಯೆ ಹಿನ್ನೆಲೆ ಶ್ರಾದ್ಧ ಕಾರ್ಯಕ್ಕೆ ತೆರಳುತ್ತಿದ್ದ ವಾಹನವೊಂದು ಪಲ್ಟಿಯಾಗಿ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಳಿಯಾಳ-ಯಲ್ಲಾಪುರ ರಾಜ್ಯ ಹೆದ್ದಾರಿಯ ಭಾಗವತಿ ಕ್ರಾಸ್ ಬಳಿ ನಡೆದಿದೆ.
ಮೃತರನ್ನು ಕೊಲ್ಲಾಪುರದ ರಮಾನಂದ ನಗರದ ಮೀನಾ ಗಣೇಶ ಪಿಳೈ(55) ಮತ್ತು ರಾಜಮ್ಮ ಪಿಳೈ(35) ಎಂದು ಗುರುತಿಸಲಾಗಿದ್ದು, ಗಣೇಶ ಪಿಳೈ, ಸರಸ್ವತಿ ಪಿಳೈ ಮತ್ತು ರಾಧಾಕೃಷ್ಣ ಪಿಳೈ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಂಬಂಧಿಕರ ಮನೆಗೆ ಮಹಾಲಯ ಅಮಾವಾಸ್ಯೆಯ ದಿನದ ಶ್ರಾದ್ಧ ಕಾರ್ಯಕ್ಕೆ ಮಹಾರಾಷ್ಟ್ರದಿಂದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾಕ್ಕೆ ತೆರಳುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ನಡೆದ ತಕ್ಷಣ ಭಾಗವತಿ ಗ್ರಾಮದ ಸಮಾಜ ಸೇವಕ ಅರ್ಜುನ ಬೋವಿ ಅವರು ಸ್ಥಳಕ್ಕೆ ದೌಡಾಯಿಸಿ ಗ್ರಾಮಸ್ಥರ ಸಹಕಾರದೊಂದಿಗೆ ಕಾರಿನಲ್ಲಿ ಸಿಲುಕಿಕೊಂಡಿದ್ದ ಗಾಯಾಳುಗಳನ್ನು ಹಾಗೂ ಮೃತ ದೇಹಗಳನ್ನು ಹೊರ ತೆಗೆದು ಆ್ಯಂಬುಲೆನ್ಸ್ ಮೂಲಕ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ. ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.