ಕಾರವಾರ: ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಬೋಟ್ನ ಅವಶೇಷಗಳು ಅರಬ್ಬಿ ಸಮುದ್ರದಲ್ಲಿ ಪತ್ತೆಯಾಗಿದ್ದು, 11 ಮೀನುಗಾರರು ನಾಪತ್ತೆಯಾಗಿದ್ದಾರೆ.
ಗೋವಾ ಕರಾವಳಿಯ 600 ನಾಟಿಕಲ್ ಮೈಲುಗಳಷ್ಟು (1,100 ಕಿ.ಮೀ.ಗಿಂತಲೂ ಹೆಚ್ಚು) ದೂರದಲ್ಲಿ ಈ ದೋಣಿಯ ಅವಶೇಷಗಳನ್ನು ಗುರುತಿಸಲಾಗಿದೆ. ದೋಣಿಯು ಯಾವುದೋ ಹಡಗಿಗೆ ಡಿಕ್ಕಿಯಾಗಿ ಅಪಘಾತಕ್ಕೊಳಗಾಗಿರುವ ಶಂಕೆ ವ್ಯಕ್ತವಾಗಿದೆ. ಕನ್ಯಾಕುಮಾರಿ ಜಿಲ್ಲೆಯ ವಲ್ಲವಿಲೈ ಕರಾವಳಿ ಗ್ರಾಮದಿಂದ ಈ ದೋಣಿಯಲ್ಲಿ ಹೊರಟಿದ್ದ 11 ಮೀನುಗಾರರ ಕುರಿತು ಈವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ನಾಪತ್ತೆಯಾದ ಮೀನುಗಾರರಿಗಾಗಿ ಇತರೆ ದೋಣಿಗಳಲ್ಲಿ ಮೀನುಗಾರರು ಕೂಡ ಶೋಧ ನಡೆಸಿದ್ದಾರೆ. ನೌಕಾಪಡೆ ಅಥವಾ ಕೋಸ್ಟ್ ಗಾರ್ಡ್ ಹಡಗು ಸಮುದ್ರದಲ್ಲಿ ಹೆಚ್ಚು ಆಳವಾದ ಸ್ಥಳವನ್ನು ತಲುಪಲು ನಾಲ್ಕೈದು ದಿನಗಳು ತೆಗೆದುಕೊಳ್ಳುವುದರಿಂದ ಮೀನುಗಾರರ ಸಂಘಗಳು ಮತ್ತು ನಾಪತ್ತೆಯಾದವರ ಸಂಬಂಧಿಕರು ಹೆಲಿಕಾಪ್ಟರ್ಗಳನ್ನು ಬಳಸಿ ಶೋಧ ಮತ್ತು ರಕ್ಷಣಾ ಕಾರ್ಯ ನಡೆಸಬೇಕೆಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರವನ್ನು ಒತ್ತಾಯಿಸಿದೆ.
'ಮರ್ಸಿಡಿಸ್' (ನೋಂದಣಿ ಸಂಖ್ಯೆ ಐಎನ್‌ಡಿ - ಟಿಎನ್ - 15 - ಎಂಎಂ - 4775) ಏಪ್ರಿಲ್ 6ರಂದು ತೆಂಗಪಟ್ಟಣಂ ಬಂದರಿನಿಂದ ಹೊರಟಿತ್ತು. ಶುಕ್ರವಾರ ಸಂಜೆಯವರೆಗೆ ಮೀನುಗಾರರು ಸುತ್ತಮುತ್ತಲಿನ ಇತರೆ ದೋಣಿಗಳಲ್ಲಿರುವವರೊಂದಿಗೆ ವೈರ್‌ಲೆಸ್ ಸಾಧನದ ಮೂಲಕ ಮಾತನಾಡಿದ್ದಾರೆ ಎಂದು ತಮಿಳುನಾಡಿನ ರಾಮನಾಥಪುರಮ್ ಜಿಲ್ಲೆಯ ಮಂಡಪಮ್ನ ಮೀನುಗಾರಿಕಾ ಸಹಾಯಕ ನಿರ್ದೇಶಕ ಜೆ.ಎಲ್.ಅಜಿತ್ ಸ್ಟಾಲಿನ್ ತಿಳಿಸಿದ್ದಾರೆ.
ಇದನ್ನೂ ಓದಿ: ನ್ಯಾ.ಮೋಹನ್ ಶಾಂತನಗೌಡರ್ ನಿಧನಕ್ಕೆ ಸಿಎಂ ಸಂತಾಪ
ಈ ಬಗ್ಗೆ ನಿನ್ನೆಯೇ ಮಾಹಿತಿ ಇದ್ದು, ಈ ಕುರಿತು ಕಾರವಾರ ಕೋಸ್ಟ್ ಗಾರ್ಡ್, ಮೀನುಗಾರಿಕಾ ಇಲಾಖೆ ಹಾಗೂ ಕರಾವಳಿ ಕಾವಲು ಪಡೆ ಪೊಲೀಸರೊಂದಿಗೂ ವಿಚಾರಿಸಲಾಗಿತ್ತು. ಆದರೆ ದೋಣಿ ಮುಳುಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ತಳ್ಳಿಹಾಕಿದ್ದರು. ನಮಗೆ ಇಲ್ಲದ ಮಾಹಿತಿ ಮಾಧ್ಯಮಗಳಿಗೆ ಹೇಗೆ ಬರುತ್ತದೆ ಎಂದು ಪ್ರಶ್ನಿಸಿದರು.