ಉಡುಪಿ: ಹಾಳಾದ ಮನೆಯಲ್ಲಿ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ಬಡ ಮಹಿಳೆಯ ಸಹಾಯಕ್ಕೆ ಮುಂದಾದ ಯುವಕರ ಗುಂಪೊಂದು ಮನೆ ನಿರ್ಮಿಸಿ ಕೊಡುವ ಮೂಲಕ ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕುಕ್ಕೆಹಳ್ಳಿ ಸಮೀಪದ ನಿವಾಸಿ ಜಯಲಕ್ಷ್ಮೀ ಆಚಾರ್ಯ ಎಂಬ ಮಹಿಳೆಯ ಪತಿ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಹೀಗಾಗಿ ಗಂಡನ ಮನೆ ಹಾಗೂ ತವರು ಮನೆಯಿಂದ ಜಯಲಕ್ಷ್ಮೀ ದೂರವಾಗಿದ್ದರು. ಬಳಿಕ ತಮ್ಮ ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ಸಂಪೂರ್ಣ ಶಿಥಿಲಾವಸ್ಥೆಯ ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದರು. ಗುಡಿಸಲಲ್ಲೇ ಇದ್ದು ಪುಟ್ಟ ಮನೆಯ ಕನಸು ಕಾಣುತ್ತಿದ್ದರು. ಆದರೆ ಮನೆ ಕಟ್ಟುವ ಕನಸಿಗೆ ಬಡತನ ತೊಡಕಾಗಿತ್ತು. ಆ ಕನಸು ನನಸಾಗದೆ ಹಾಗೇ ಉಳಿದಿತ್ತು.
ಮಹಿಳೆಯ ಬಡತನ, ಶಿಥಿಲವಾಗಿರುವ ಮನೆಯನ್ನು ಕಂಡ ಯುವಕರ ತಂಡವೊಂದು ಮನೆ ನಿರ್ಮಿಸಿಕೊಡಲು ಮುಂದಾಗಿತ್ತು. ಸುಮಾರು 25 ಮಂದಿ ಯುವಕರು ಸೇರಿಕೊಂಡು ಮನೆ ನಿರ್ಮಾಣ ಸಮಿತಿ ರಚಿಸಿಕೊಂಡು ತಾವೇ ಹಣ ಹೊಂದಿಸಿಕೊಂಡು ಸಮಯ ಸಿಕ್ಕಾಗ ಮನೆ ಕೆಲಸವನ್ನು ಆರಂಭಿಸಿದ್ದರು. ಯುವಕರ ಕಾರ್ಯವನ್ನು ನೋಡಿದ ದಾನಿಗಳು ಸಹಾಯ ಮಾಡಿ ಪ್ರೋತ್ಸಾಹ ನೀಡಿದ್ದರು. ಇವರೆಲ್ಲರ ಪರಿಶ್ರಮದಿಂದ ಬಡ ಮಹಿಳೆಗೆ ಚಂದದ ಮನೆ ನಿರ್ಮಾಣವಾಗಿದೆ.
ತಾನು ಕಂಡ ಕನಸನ್ನು ನನಸು ಮಾಡಿಕೊಟ್ಟ ಯುವಕರ ಗುಂಪಿಗೆ ಬಡ ಮಹಿಳೆ ಜಯಲಕ್ಷ್ಮೀ ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ: ನಿಂತಿದ್ದ ಲಾರಿಗೆ ಗುದ್ದಿದ ಮತ್ತೊಂದು ಲಾರಿ: ಚಿತ್ರದುರ್ಗದಲ್ಲಿ ಇಬ್ಬರು ದುರ್ಮರಣ