ಉಡುಪಿ: 2018ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಪಡೆದು ದೇಶಕ್ಕೆ ಮೊದಲ ಪದಕ ತಂದಿದ್ದ ಕುಂದಾಪುರ ತಾಲೂಕಿನ ಕುಗ್ರಾಮ ಚಿತ್ತೂರು ಗ್ರಾಮದ ವೇಟ್ ಲಿಫ್ಟರ್ ಗುರುರಾಜ್ ಅವರೀಗ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್-2022 ಕ್ರೀಡಾಕೂಟದಲ್ಲೂ ಕಂಚಿನ ಪದಕಕ್ಕೆ ಕೊರಳೊಡ್ಡಿ ಮತ್ತೊಂದು ಸಾಧನೆ ಮಾಡಿದ್ದಾರೆ.
ಬರ್ಮಿಂಗ್ಹ್ಯಾಮ್ನಲ್ಲಿ ಶುಕ್ರವಾರ ಆರಂಭವಾದ ಕ್ರೀಡಾಕೂಟದಲ್ಲಿ ಭಾರತೀಯ ವೇಟ್ ಲಿಫ್ಟರ್‌ಗಳ ತಂಡ ಪಾಲ್ಗೊಂಡಿದೆ. ಪ್ರತಿಷ್ಠಿತ ಕ್ರೀಡಾ ಹಬ್ಬದಲ್ಲಿ ಗುರುರಾಜ್ ಕಂಚು ಪದಕ ಗೆಲ್ಲವ ಮೂಲಕ ಉಡುಪಿ ಜಿಲ್ಲೆಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಕಳೆದ ಬಾರಿ ಪುರುಷರ 56 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಇವರು ಒಟ್ಟು 249 ಕೆಜಿ ಭಾರ ಎತ್ತಿ ಬೆಳ್ಳಿಯ ಪದಕ ಗೆದ್ದಿದ್ದರು. ಈ ಬಾರಿ 61 ಕೆಜಿ ವಿಭಾಗದಲ್ಲಿ ಗುರುರಾಜ್ ಸ್ಪರ್ಧಿಸಿದ್ದು, ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕುಟುಂಬಸ್ಥರು ಹೇಳಿದ್ದಿಷ್ಟು..: ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶವಾದ ಚಿತ್ತೂರು ಎಂಬಲ್ಲಿ ಗುರುರಾಜ್ ಕಡು ಬಡತನದಲ್ಲಿ ಬೆಳೆದು ಈಗ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಬೆಳೆದಿದ್ದಾರೆ. ಈವರೆಗೆ ಗುರುರಾಜ್ ಕಠಿಣ ಸವಾಲುಗಳನ್ನು ಎದುರಿಸಿದ್ದಾರೆ. ಅವರ ಆಸಕ್ತಿ ಹಾಗೂ ಶ್ರದ್ಧೆಯಿಂದ ಸಾಧನೆ ಸಾಧ್ಯವಾಗಿದೆ ಎಂದು ಕುಟುಂಬಸ್ಥರು ಹೇಳುತ್ತಾರೆ.
ಸಾಧನೆಯ ಹಾದಿ..: 2016ರಲ್ಲಿ 56 ಕೆಜಿ ವಿಭಾಗದಲ್ಲಿ ಮಲೇಶಿಯಾದಲ್ಲಿ ಕಾಮನ್‌ವೆಲ್ತ್ ಚಾಂಪಿಯನ್ ಶಿಪ್, 2017ರಲ್ಲಿ ಆಸ್ಟ್ರೇಲಿಯಾದಲ್ಲಿ ಚಾಂಪಿಯನ್ ಶಿಪ್, 2016ರಲ್ಲಿ ದಕ್ಷಿಣ ಏಷ್ಯಾ ಗೇಮ್ಸ್ನಲ್ಲಿ ಚಿನ್ನ, ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಚಿನ್ನ, ಬೆಳ್ಳಿ ಪದಕ, ಕಳೆದ ವರ್ಷ 61 ಕೆಜಿ ವಿಭಾಗದಲ್ಲಿ ಉಜ್ಬೇಕಿಸ್ತಾನದಲ್ಲಿ ಕಾಮನ್‌ವೆಲ್ತ್ ಚಾಂಪಿಯನ್ ಶಿಪ್‌ನಲ್ಲಿ ಬೆಳ್ಳಿ ಪಡೆದಿದ್ದು, 2018ರಲ್ಲಿ ರಾಜ್ಯ ಸರ್ಕಾರ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.
ಗುರುರಾಜ್ ಮನೆಯಲ್ಲಿ ಸಂಭ್ರಮ: ಇಂಗ್ಲೆಂಡ್‌ನಲ್ಲಿ ಗುರುರಾಜ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದು, ಇತ್ತ ಕುಟುಂಬಸ್ಥರು ಸಂಭ್ರಮಿಸಿದ್ದಾರೆ. ಕಂಚಿನ ಪದಕ ಗೆದ್ದಿರುವುದು ನಮಗೆ ಸಂತೋಷ ತಂದರೂ ಮಗನಿಗೆ ಸಮಾಧಾನ ತಂದಿರಲಿಕ್ಕಿಲ್ಲ. ಚಿನ್ನ ಗೆಲ್ಲಬೇಕು ಅನ್ನೋದು ಗುರು ಕನಸಾಗಿದ್ದು, ಕಂಚು ಬಂದಿರುವುದು ನಮಗೆ ಸಂತೋಷ ತಂದಿದೆ. ಪದೇ ಪದೇ ಗಾಯ ಮಾಡಿಕೊಳ್ಳುತ್ತಿದ್ದ, ಇಂಗ್ಲೆಂಡ್‌ಗೆ ಹೋದ ಮೇಲೂ ಕಾಲು, ಕೈಗೆ ಗಾಯ ಮಾಡಿಕೊಂಡಿದ್ದಾನೆ. ಸ್ಪರ್ಧೆಗೆ ನಾಲ್ಕು ದಿನ ಮುನ್ನ ಜ್ವರದಿಂದ ನರಳುತ್ತಿದ್ದ. ಇದೆಲ್ಲಾ ಚಿನ್ನದ ಪದಕ ತಪ್ಪಲು ಕಾರಣವಾಯಿತೋ ಏನೋ. ಮಗ ದೇಶಕ್ಕಾಗಿ ಪದಕ ತಂದಿರುವುದು ಹೆಮ್ಮೆ ಉಂಟು ಮಾಡಿದೆ ಎಂದು ತಂದೆ ಮಹಾಬಲ ಪೂಜಾರಿ ಹೇಳಿದರು.
ಇದನ್ನೂ ಓದಿ: ಕಂಚು ಗೆದ್ದ ಕನ್ನಡಿಗ ಗುರುರಾಜ್‌ಗೆ ಸಿಎಂ ಅಭಿನಂದನೆ.. ಕ್ರೀಡಾ ಸಚಿವರಿಂದ 8 ಲಕ್ಷ ರೂ. ಪುರಸ್ಕಾರ ಘೋಷಣೆ
ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮದ ಜಡ್ಡು ಎಂಬಲ್ಲಿನ ನಿವಾಸಿ ಮಹಾಬಲ ಪೂಜಾರಿ ಕಾರು ಚಾಲಕರಾಗಿದ್ದು, ಆರು ಮಕ್ಕಳಲ್ಲಿ ಗುರುರಾಜ್ ಐದನೆಯವರು. ಪ್ರಾಥಮಿಕ ಶಿಕ್ಷಣವನ್ನು ವಂಡ್ಸೆ ಸರ್ಕಾರಿ ಶಾಲೆಯಲ್ಲಿ ಪಡೆದು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ನಂತರದ ಶಿಕ್ಷಣವನ್ನು ಉಜಿರೆ ಎಸ್‌ಡಿಎಂ ಕಾಲೇಜ್ನಲ್ಲಿ ಪಡೆದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ಗುರುರಾಜ್‌ಗೆ ದೈಹಿಕ ಶಿಕ್ಷಕ ಸುಕೇಶ್ ಶೆಟ್ಟಿ ತರಬೇತಿ ನೀಡಿದ್ದರು. ಉಜಿರೆ ಎಸ್‌ಡಿಎಂ ಕಾಲೇಜಿನ ಎಂ.ರಾಜೇಂದ್ರ ಪ್ರಸಾದ್ ವೇಟ್ ಲಿಫ್ಟಿಂಗ್ ತರಬೇತಿ ನೀಡಿದ್ದರು.