ಉಡುಪಿ: ಶಿವಸೇನೆಗೆ ಇನ್ನೂ ಕಾಲ ಮಿಂಚಿಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆಗೆ ಕೈ ಜೋಡಿಸಿ ನಿಮ್ಮನ್ನು ಪ್ರೀತಿ ವಿಶ್ವಾಸದಿಂದ ನೋಡ್ಕೊಳ್ತೀವಿ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದ ಗೌಡ ಆಹ್ವಾನ ನೀಡಿದ್ದಾರೆ.
ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯ ಬಗ್ಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಜನಾದೇಶ ಬಿಜೆಪಿ ನೇತೃತ್ವದ ಟೀಮ್ಗೆ ಸಿಕ್ಕಿತ್ತು. ಅಧಿಕಾರಕ್ಕಾಗಿ ನಮ್ಮ ಮಿತ್ರರೇ ಆಟವಾಡ್ತಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾದ ಬೆಳವಣಿಗೆ. ಶಿವಸೇನೆ ಮತ್ತು ಬಿಜೆಪಿ ತುಂಬಾ ಸಮಯದ ಗೆಳೆಯರು. ನಮ್ಮ ಅರ್ಧದಷ್ಟು ಸಂಖ್ಯೆ ಕೂಡಾ ಶಿವಸೇನೆಯಲ್ಲಿ ಇಲ್ಲ. ಇನ್ನೂ ಕಾಲ ಮಿಂಚಿಲ್ಲ, ಪ್ರೀತಿ ವಿಶ್ವಾಸದಿಂದ ನೋಡ್ಕೋತೀವಿ. ಮೋದಿ ಆಡಳಿತ, ಫಡ್ನವೀಸ್ ಆಡಳಿತ ಮಾದರಿಯಾಗಿದೆ. ಮಹರಾಷ್ಟ್ರದಲ್ಲಿ ಇನ್ನೂ ಯಾವ ಹೊಂದಾಣಿಕೆಯೂ ಆಗಿಲ್ಲ. ರಾಜ್ಯಪಾಲರು ನ್ಯಾಚುರಲ್ ಜಸ್ಟೀಸ್ ಪಾಲಿಸುತ್ತಿದ್ದಾರ?ಎಲ್ಲರಿಗೂ ಸರ್ಕಾರ ನಡೆಸಲು ಆಹ್ವಾನ ನೀಡುತ್ತಿದ್ದಾರೆ. ಮುಂದೆ ರಾಷ್ಟ್ರಪತಿ ಆಡಳಿತ ಬಂದರೂ ಬರಬಹುದು ಎಂದರು.
ಇನ್ನು ಅನರ್ಹ ಶಾಸಕರ ಬಗ್ಗೆ ಮಾತನಾಡಿದ ಸದಾನಂದ ಗೌಡ, ನಾಳೆ ಅನರ್ಹರ ತೀರ್ಪು ಬರುತ್ತೆ. ತೀರ್ಪು ಬಂದ ನಂತರ ಮುಂದಿನ ತೀರ್ಮಾನ ಮಾಡುತ್ತೇವೆ. ನ್ಯಾಯಾಂಗವನ್ನು ಗೌರವದಿಂದ ನೋಡ್ತೇವೆ. ರಾಮಜನ್ಮಭೂಮಿ ವಿಚಾರದಲ್ಲಿ ಕೋರ್ಟ್ ಸಮಾನತೆಯ ಸಂದೇಶ ಕೊಟ್ಟಿದೆ. ಅನರ್ಹರ ವಿಚಾರದಲ್ಲಿಯೂ ಯೋಗ್ಯ ರೀತಿಯ ತೀರ್ಪು ಬರುತ್ತೆ ಎಂದರು. ಹಾಗೆಯೇ ಸಮಾನ ನಾಗರಿಕಸಂಹಿತೆ ಬಗ್ಗೆ ಮಾತನಾಡಿದ ಅವರು ಪ್ರಣಾಳಿಕೆಯಲ್ಲಿ ಇರುವ ಒಂದೊಂದೆ ಭರವಸೆ ಈಡೇರಿಲಾಗುತ್ತಿದೆ. ಪ್ರಣಾಳಿಕೆಯನ್ನು ಈಡೇರಿಸುವುದು ನಮ್ಮ ಧರ್ಮ. ಸಮಾನ ನಾಗರಿಕ ಸಂಹಿತೆ ದೇಶವನ್ನು ಏಕತೆ, ಅಖಂಡತೆ ಬಗ್ಗೆ ಕೊಂಡೊಯ್ಯುತ್ತೆ. ಖಂಡಿತವಾಗಿಯೂ ಪೂರ್ವ ತಯಾರಿಯ ಜೊತೆಗೆ ಸಮಾನ ನಾಗರೀಕ ಸಂಹಿತೆ ಜಾರಿಗೆ ಬರುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.