ಉಡುಪಿ: ಸ್ಯಾಂಡಲ್ವುಡ್ ಸ್ಟಾರ್ ವಾರ್ ಹೆಸರಲ್ಲಿ ಅವರ ಅಭಿಮಾನಿಗಳು ಹೊಡೆದಾಡಿಕೊಳ್ಳೋದನ್ನು ಕೇಳಿದ್ದೇವೆ. ಆದರೆ ಇದೊಂಥರಾ ಡಿಫರೆಂಟ್ ಕೇಸ್, ಇಲ್ಲಿ ಒದೆ ತಿಂದವನು ನಟ ಸುದೀಪ್ ಅಭಿಮಾನಿ. ಹೀಗೆ ಸುದೀಪ್ ಅಭಿಮಾನಿಗೆ ಅವಧೂತ ವಿನಯ ಗುರೂಜಿಯ ಶಿಷ್ಯರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅವದೂತ ವಿನಯ್ ಗುರೂಜಿಯವರು ನಟ ಸುದೀಪ್ಗೆ ಅವಮಾನ ಮಾಡಿದ್ದಾರೆ ಎನ್ನಲಾದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಕೊನೆಗೆ ತಾವು ಹೇಳಿದ್ದನ್ನು ಎಡಿಟ್ ಮಾಡಲಾಗಿದೆ ಎಂದು ಗುರೂಜಿ ಸ್ಪಷ್ಟೀಕರಣವನ್ನೂ ಕೊಟ್ಟಿದ್ದರು. ಹೀಗೆ ಹೈ ಲೆವಲ್ನಲ್ಲಿ ಈ ಪ್ರಕರಣ ರಾಜಿಯಾದರೂ, ತಳಮಟ್ಟದಲ್ಲಿ ಗಂಭೀರ ಪರಿಣಾಮಗಳು ಉಂಟಾಗುತ್ತಿವೆ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಟ ಸುದೀಪ್ ಅಭಿಮಾನಿ ರತ್ನಾಕರ ಎಂಬವರ ಮೇಲೆ, ವಿನಯ ಗುರೂಜಿಯ ಶಿಷ್ಯರು ಎಂದು ಹೇಳಿಕೊಂಡು ಏಳೆಂಟು ಮಂದಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಗಾಯಾಳು ರತ್ನಾಕರ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕುಂದಾಪುರದ ನಿವಾಸಿ ರತ್ನಾಕರ್ ತನ್ನ ಫೇಸ್ಬುಕ್ ಅಕೌಂಟ್ನಲ್ಲಿ ವಿನಯ್ ಗುರೂಜಿ ವಿರುದ್ಧ ಬಂದಿದ್ದ ಕೆಲವೊಂದು ಪೋಸ್ಟ್ ಶೇರ್ ಮಾಡಿದ್ದ. ಈ ಮೂಲಕ ಸುದೀಪ್ ಬಗ್ಗೆ ಅಭಿಮಾನ ತೋರ್ಪಡಿಸಿದ್ದ. ಇದರಿಂದ ಕೆರಳಿದ ಒಂದು ಗುಂಪು ಏಕಾಏಕಿ ಬೈಕ್ನ ರಾಡ್ ಬಳಸಿ, ರತ್ನಾಕರ್ ಮೇಲೆ ಹಲ್ಲೆ ಮಾಡಿದೆ. ನಾವು ವಿನಯ್ ಗುರೂಜಿ ಶಿಷ್ಯರು, ಗುರೂಜಿಗೆಗೆ ಫೇಸ್ಬುಕ್ನಲ್ಲಿ ಅವಹೇಳನ ಮಾಡುತ್ತಿಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆದಿದ್ದಾರೆ ಎನ್ನಲಾಗಿದೆ.
ಪ್ರಕರಣ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಸ್ಥಳೀಯ ನಿವಾಸಿಗಳಾದ ಗುರುರಾಜ್ ಪುತ್ರನ್, ಸಂತೋಷ್, ಪ್ರದೀಪ್, ರವಿರಾಜ್ ಬಂಧಿತ ಆರೋಪಿಗಳು. ಉಳಿದವರ ಪತ್ತೆಗೆ ಎರಡು ತಂಡಗಳನ್ನೂ ರಚಿಸಲಾಗಿದೆ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.