ಉಡುಪಿ : ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರಿಂದ ಮಂತ್ರೋಪದೇಶ ಪಡೆದು ಸುಭದ್ರಾ ಎಂದು ಹೆಸರಿಸಲ್ಪಟ್ಟಿದ್ದ ಅಧ್ಯಾತ್ಮದ ಪಥದಲ್ಲಿ ಉನ್ನತ ಸಾಧನೆಗೈದಿದ್ದ ತಪೋವನಿ ಮಾತಾಜಿ ಯಾನೆ ಸುಭದ್ರಾ ಮಾತಾಜಿ ಹರಿದ್ವಾರದ ರಾಮಕೃಷ್ಣ ಆಶ್ರಮದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇವರು ಮೂಲತಃ ಉಡುಪಿಯ ಪಂದುಬೆಟ್ಟಿನವರಾಗಿದ್ದು, ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರಿಂದ ಮಂತ್ರೋಪದೇಶ ಪಡೆದು ಸುಭದ್ರಾ ಎಂದು ಹೆಸರಿಸಲ್ಪಟ್ಟಿದ್ದರು. ಬಾಲ್ಯದಲ್ಲೇ ಆಧ್ಯಾತ್ಮದ ಸೆಳೆತಕೊಕ್ಕೊಳಗಾಗಿ ಉಡುಪಿಯ ಮಠ ಮತ್ತು ದೇವಾಲಯದ ಪರಿಸರದಲ್ಲೇ ಭಜನೆ, ಪ್ರವಚನ, ಸತ್ಸಂಗ ಮೊದಲಾದವುಗಳಲ್ಲಿ ಭಾಗಿಯಾಗುತ್ತಿದ್ದರು. ಮುಂದೆ ಪೇಜಾವರ ಶ್ರೀಗಳಲ್ಲಿ ಮಂತ್ರೋಪದೇಶ ಪಡೆದು ಆಧ್ಯಾತ್ಮ ಸಾಧನೆಗಾಗಿ ಸುಮಾರು 50-60 ವರ್ಷಗಳ ಹಿಂದೆ ಬಹಳ ಕಷ್ಟಪಟ್ಟು ಉತ್ತರದ ಹಿಮಾಲಯ ಸೇರಿದ್ದರು.
ಹಿಮಾಲಯದ ಗಂಗೋತ್ರಿಯಿಂದಲೂ ಬಹಳ ಎತ್ತರದ ಪ್ರದೇಶ ಪಾಂಡವರು ತಪಸ್ಸಾಚರಿಸಿದ್ದ ತಪೋವನದಲ್ಲಿ ಅತ್ಯಂತ ಪ್ರತಿಕೂಲ ವಾತಾರವರಣದಲ್ಲೂ ನಿರಂತರ ಒಂಬತ್ತು ವರ್ಷಗಳ ಕಾಲ ತಪಸ್ಸಾಚರಿಸಿದ್ದರು. ಈ ಸಾಧನೆಗೈದ ಜಗತ್ತಿನ ಏಕೈಕ ಮಹಿಳೆ ಎನ್ನುವುದು ಹಿಮಾಲಯದ ನೂರಾರು ಸಾಧು ಸಂತರ ಅಭಿಪ್ರಾಯ. ಈ ಸಾಧನೆಯಿಂದಲೇ ಹಿಮಾಲಯ ಪ್ರದೇಶದಲ್ಲಿ ತಪೋವನಿ ಮಾ ಎಂದೆ ಪ್ರಸಿದ್ಧರಾಗಿದ್ದರು.
ಓದಿ: ಶಾಲೆ-ಕಾಲೇಜುಗಳ ಸಮಯಕ್ಕೆ ಹೊಂದುವಂತೆ ಬಸ್ ವ್ಯವಸ್ಥೆ ಮಾಡಿ.. ಸಾರಿಗೆ ಸಚಿವರಿಗೆ ಶಿಕ್ಷಣ ಮಂತ್ರಿ ಪತ್ರ
ಆ ಬಳಿಕ ಹಿಮಾಲಯದ ಪ್ರದೇಶದಲ್ಲೇ ಆಶ್ರಮವೊಂದನ್ನು ತೆರೆದು ಸಾಧುಗಳಿಗೆ ಯಾತ್ರಿಗಳಿಗೆ ಊಟೋಪಚಾರ,ಆರೋಗ್ಯ ಸೇವೆಗಳನ್ನು ನಡೆಸುತ್ತಿದ್ದರು. ತೀವ್ರ ಅನಾರೋಗ್ಯಕ್ಕೊಳಗಾದ ಬಳಿಕ ಹರಿದ್ವಾರದ ಆಚಾರ್ಯ ಬಾಲಕೃಷ್ಣ ಅವರ ವಿಶೇಷ ಮುತುವರ್ಜಿಯಲ್ಲಿ ಅಲ್ಲಿನ ರಾಮಕೃಷ್ಣ ಆಶ್ರಮದ ಆಸ್ಪತ್ರೆಯಲ್ಲಿ ಅನೇಕ ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಜೀವನ ಪರ್ಯಂತ ತನ್ನ ಎಲ್ಲಾ ಆಧ್ಯಾತ್ಮಿಕ ಸಾಧನೆಗೆ ಉಡುಪಿ ಕೃಷ್ಣ ಮತ್ತು ಪೇಜಾವರ ಶ್ರೀಗಳೇ ಕಾರಣ ಎಂದು ಹಿಮಾಲಯದ ಪ್ರತಿಯೊಬ್ಬರಲ್ಲೂ ಹೇಳಿಕೊಳ್ಳತ್ತಿದ್ದರು. ಅವರ ಆಧ್ಯಾತ್ಮ ಸಾಧನೆಯ ಕುರಿತಾಗಿ ಹಿಂದಿಯಲ್ಲಿ ಪುಸ್ತಕವೊಂದು ಪ್ರಕಟವಾಗಿತ್ತು. ಅದರ ಕನ್ನಡ ಅನುವಾದವನ್ನು ಪ್ರೊ.ಭಾಸ್ಕರ್ ಮಯ್ಯ ಮಾಡಿದ್ದು, ಮಾತಾಜಿಯವರ ಮೂವರು ಸಹೋದರರು ಸದ್ಯ ಉಡುಪಿಯಲ್ಲೇ ಇದ್ದರು.
ನರೇಂದ್ರ ಮತ್ತಿತರರು ಪ್ರಕಟಿಸಿದ್ದು ಇತ್ತೀಚೆಗಷ್ಟೇ ಹರಿದ್ವಾರದ ಆಸ್ಪತ್ರೆಯಲ್ಲೇ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಆಚಾರ್ಯ ಬಾಲಕೃಷ್ಣರು ಮಾತಾಜಿ ಸಮ್ಮುಖದಲ್ಲೇ ಪುಸ್ತಕ ಬಿಡುಗಡೆ ಮಾಡಿದ್ದರು. ವಾಸುದೇವ ಭಟ್ ಪೆರಂಪಳ್ಳಿಯವರು ಅವರ ಜೀವಿತಾವಧಿಯಲ್ಲೇ ಅವರ ಉಪಸ್ಥಿತಿಯಲ್ಲೆ ಈ ಕೃತಿ ಬಿಡುಗಡೆಯಾಗಬೇಕೆಂದು ಬಹಳ ಶ್ರಮಪಟ್ಟು ಈ ಕಾರ್ಯಕ್ರಮ ಸಂಯೋಜಿಸಿದ್ದರು.
ಮಾತಾಜಿ ನಿಧನಕ್ಕೆ ಸಂತಾಪ : ತಪೋವನಿ ಮಾ ನಿಧನಕ್ಕೆ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಉಡುಪಿ ಕೃಷ್ಣ ಮತ್ತು ತಮ್ಮ ಗುರುಗಳಲ್ಲಿ ಅನನ್ಯ ಶ್ರದ್ಧೆ ಭಕ್ತಿಯನ್ನು ಹೊಂದಿದ್ದ ಮಾತಾಜಿಯವರು ಕಠೋರ ಆಧ್ಯಾತ್ಮ ತುಡಿತದಿಂದ ಮಾಡಿದ ಸಾಧನೆ ಮಾದರಿ. ಅವರ ಆತ್ಮಕ್ಕೆ ಶ್ರೀಕೃಷ್ಣ ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಕೇಂದ್ರದ ಮಾಜಿ ಮಂತ್ರಿ ಉಮಾ ಭಾರತಿ, ಪ್ರೊ. ಭಾಸ್ಕರ್ ಮಯ್ಯ, ಎಂ.ಪೇಜಾವರ ಮಠದ ದಿವಾನ್ ರಘುರಾಮಾಚಾರ್ಯ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶಾಮಲಾ ಕುಂದರ್, ವಾಸುದೇವ ಭಟ್ ಪೆರಂಪಳ್ಳಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.