ಉಡುಪಿ : ಪ್ರಧಾನಿ ನರೇಂದ್ರ ಮೋದಿ ಜೊತೆ ನಡೆಯುವ ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಜಿಲ್ಲೆಯ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿ ಅನುಷಾ ಆಯ್ಕೆಯಾಗಿದ್ದಾಳೆ.
ಅನುಷಾ, ಹೆಬ್ರಿ ತಾಲೂಕು ಆಲ್ಬಾಡಿ-ಆರ್ಡಿಯ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿನಿ. ಮಡಾಮಕ್ಕಿ ಸಮೀಪದ ಕೃಷ್ಣ ಕುಲಾಲ ಮತ್ತು ಜಯಲಕ್ಷ್ಮಿ ಕೆ.ಕುಲಾಲ ಎಂಬ ದಂಪತಿಯ ಮಗಳಾದ ಅನುಷಾ ಪ್ರತಿಭಾವಂತೆಯಾಗಿ ಗುರುತಿಸಿಕೊಂಡಿದ್ದಾಳೆ. ಕೃಷ್ಣ ಕುಲಾಲ ಗಾರೆ ಕೆಲಸಗಾರರಾಗಿದ್ದು, ತಾಯಿ ಜಯಲಕ್ಷ್ಮಿ ಗೇರು ಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಈಗಾಗಲೇ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ಪಾಲ್ಗೊಳ್ಳಲು ಹತ್ತು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಅರ್ಜಿ ಹಾಕಿದ್ದು, ಅದರಲ್ಲಿ 30 ವಿದ್ಯಾರ್ಥಿಗಳು ಪ್ರಧಾನಿ ಜೊತೆ ನೇರ ಸಂವಾದ ನಡೆಸಲು ಆಯ್ಕೆಯಾಗಿದ್ದಾರೆ. ರಾಜ್ಯದಿಂದ ಇಬ್ಬರು ಆಯ್ಕೆ ಆಗಿದ್ದು, ಬೆಂಗಳೂರಿಂದ ಓರ್ವ ವಿದ್ಯಾರ್ಥಿ, ಉಡುಪಿ ಜಿಲ್ಲೆಯಿಂದ ಅನುಷಾ ಆಯ್ಕೆಯಾಗಿದ್ದಾಳೆ.