ಉಡುಪಿ: ಜಿಲ್ಲೆಯಾದ್ಯಂತ ನೀರಿಗೆ ಹಾಹಾಕಾರ ಉಂಟಾಗಿದ್ದು, ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಕೂಡ ಸಂಕಟ ಎದುರಾಗಿದೆ. ಉಡುಪಿಯ ಶ್ರೀ ಕೃಷ್ಣ ಮಠದಲ್ಲಿರುವ ಸುಭದ್ರೆ ಆನೆಗೆ ಪ್ರತಿನಿತ್ಯ ಸ್ನಾನ ಹಾಗೂ ಕುಡಿಯುವ ನೀರಿಗೆ ಸಮಸ್ಯೆ ಆಗಿತ್ತು. ಇದೀಗ ಸಾಮಾಜಿಕ ಕಾರ್ಯಕರ್ತರು ಆನೆಗೆ ಅಗತ್ಯ ನೀರಿನ ವ್ಯವಸ್ಥೆ ಮಾಡಿಸಿ ಮೂಕ ಪ್ರಾಣಿಗೆ ಸ್ಪಂದಿಸಿದ್ದಾರೆ.
ಉಡುಪಿಯ ಶ್ರೀ ಕೃಷ್ಣ ಮಠದ 28 ವರ್ಷದ ಆನೆ ಸುಭದ್ರೆಗೆ ನಿತ್ಯ ಸ್ನಾನ ಅಗತ್ಯವಾಗಿ ಆಗಬೇಕಾಗಿದೆ. ಆನೆಯ ಸ್ನಾನ ಕಾರ್ಯಕ್ಕೆ ಸುಮಾರು 2 ಸಾವಿರ ಲೀಟರಿನಷ್ಟು ನೀರು ಹಾಗೂ ಕುಡಿಯಲು ಸುಮಾರು 300 ಲೀಟರ್ ನೀರು ಬೇಕಾಗುತ್ತದೆ. ಆದ್ರೆ ಕಳೆದ ಹಲವಾರು ದಿನಗಳಿಂದ ಉಡುಪಿಯಾದ್ಯಂತ ನೀರಿನ ಸಮಸ್ಯೆ ಉದ್ಭವವಾಗಿದ್ದು, ಮಠದ ಆನೆಗೂ ನೀರಿನ ಸಮಸ್ಯೆ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ಕಳೆದ ವಾರದಿದಂದ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಹಾಗೂ ಪಂಚರತ್ನ ಸೇವಾ ಟ್ರಸ್ಟ್, ಉಡುಪಿ ನಗರದಲ್ಲಿ ಕುಡಿಯುವ ನೀರಿನ ಕೊರತೆ ಇರುವ ಜನವಸತಿ ಬಡಾವಣೆಗಳಲ್ಲಿ ಉಚಿತ ನೀರು ವಿತರಿಸುತ್ತಿದೆ. ಮಠದ ಆನೆಗೂ ನೀರು ಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಸ್ಪಂದಿಸಿದ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರನಾಥ ಮೆಸ್ತ್, ರಾಜು ಕಾಪು ಹಾಗೂ ಬಾಲಗಂಗಾಧರ್ ರಾವ್ ಶ್ರೀ ಕೃಷ್ಣ ಮಠದ ಆನೆ ಸುಭದ್ರೆಗೆ ಬೆಳಗಿನ ಜಾವದ ಸ್ನಾನ ಕಾರ್ಯಕ್ಕೆಂದು 5 ಸಾವಿರ ಲೀಟರ್ ನೀರು ತಂದು ಒದಗಿಸಿದ್ದಾರೆ.
ಮಾವುತರ ನಿರ್ದೇಶನದಂತೆ ರಾಜಾಂಗಣದ ಬಳಿ ಆನೆ ಸ್ನಾನ ಮಾಡಿಸುವ ಸ್ಥಳದಲ್ಲಿ ಮೈ ಉಜ್ಜಿ ಸ್ನಾನವನ್ನು ಮಾಡಿಸಿ ಸುಭದ್ರೆಯನ್ನು ಶುಭ್ರಗೊಳಿಸಿದ್ದಾರೆ. ಕಾರ್ಯಕರ್ತರಿಗೆ ಆನೆ ಶುಚಿಗೊಳಿಸಲು ಸುಮಾರು 2 ಗಂಟೆ ಅವಧಿ ತಗುಲಿದೆ ಹಾಗೂ 2 ಸಾವಿರ ಲೀಟರ್ ನೀರು ವ್ಯಯವಾಗಿದೆ.