ಉಡುಪಿ: ಮಾದಕ ದ್ರವ್ಯದ ವಿರುದ್ಧ ಕರ್ನಾಟಕ ಪೊಲೀಸರು ಕಳೆದ ಎರಡು ತಿಂಗಳಿಂದ ಸಮರ ಸಾರಿದ್ದಾರೆ. ಈ ನಡುವೆ ಉಡುಪಿ ಪೊಲೀಸರು ಜಿಲ್ಲೆಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಈ ಬಗ್ಗೆ ಮಾಹಿತಿ ನೀಡಿ, ಉಡುಪಿಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸಿಂಥೆಟಿಕ್ ಡ್ರಗ್ ಜಾಲವೊಂದು ಕಾರ್ಯಾಚರಣೆ ಮಾಡಿರುವುದು ಬೆಳಕಿಗೆ ಬಂದಿರುವ ಬಗ್ಗೆ ಮಾಹಿತಿ ನೀಡಿದರು. ಒಟ್ಟು 73.39 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ. ಡಾರ್ಕ್ ನೆಟ್ ಮೂಲಕ ವ್ಯವಹರಿಸುತ್ತಿದ್ದ ಅಂತಾರಾಷ್ಟ್ರೀಯ ಜಾಲ ಪತ್ತೆ ಮಾಡಿ, ನಾಲ್ವರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದೇವೆ ಎಂದರು.
ಮಣಿಪಾಲ ವಿದ್ಯಾರ್ಥಿಗಳಿಗೆ ಸೇಲ್ ಮಾಡಲು ತರಿಸಿದ್ದ ನಿಷೇಧಿತ ಡ್ರಗ್ ಇದಾಗಿದ್ದು, 540 ಗ್ರಾಂ ತೂಕದ 1019 ಎಂಡಿಎಂಎ ಮಾತ್ರೆಗಳು, ಒಂದು ಸಾವಿರ ಎಲ್ ಎಸ್ ಡಿ ಸ್ಟಾಂಪ್ಸ್, 30 ಗ್ರಾಂ ಬ್ರೌನ್ ಶುಗರ್, 131 ಗ್ರಾಂ ಹೈಡ್ರೋ ವೀಡ್ ವಶಕ್ಕೆ ಪಡೆದಿರುವುದಾಗಿ ಹೇಳಿದರು. ಕಳೆದ ಎರಡು ವಾರಗಳಿಂದ ಕಾರ್ಯಾಚರಣೆ ನಡೆಸಿದ 3 ಪೊಲೀಸ್ ತಂಡಗಳಿಗೆ ಎಸ್ಪಿ ಅಭಿನಂದನೆ ಸಲ್ಲಿಸಿದರು. ಮಾದಕ ದ್ರವ್ಯ ಮಾರಾಟದ ವಿರುದ್ಧ ಕಾರ್ಯಾಚರಣೆ ಮುಂದುವರೆಸುವುದಾಗಿ ಎಸ್ಪಿ ಎಚ್ಚರಿಕೆ ನೀಡಿದರು.