ಉಡುಪಿ: ಈಶ್ವರಪ್ಪನವರ ಬಂಧನವಾಗದೆ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಕಳುಹಿಸುವುದಿಲ್ಲ ಎಂದಿದ್ದ ಸಂಬಂಧಿಕರನ್ನು ಪೊಲೀಸರು ಮನವೊಲಿಸಿದ್ದಾರೆ. ಈಗ ಮೃತದೇಹವನ್ನು ಬೆಳಗಾವಿಗೆ ಕುಟುಂಬಸ್ಥರು ತೆಗೆದುಕೊಂಡು ಹೋಗುತ್ತಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಅಂತ್ಯಗೊಂಡಿದೆ.
ಸುಮಾರು ಎರಡು ಗಂಟೆಗಳ ಕಾಲ ಮರಣೋತ್ತರ ಪರೀಕ್ಷೆ ನಡೆದಿದೆ. ಎಸ್ಪಿ ವಿಷ್ಣುವರ್ಧನ್ ಅವರು ಸಂತೋಷ್ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ನಾಳೆ ಬೆಳಗ್ಗೆ 4 ಗಂಟೆ ಸುಮಾರಿಗೆ ಮೃತದೇಹ ಹಿಂಡಲಗಾ ತಲುಪುವ ಸಾಧ್ಯತೆ ಇದೆ.
ಈ ವೇಳೆ ಸಹೋದರ ಪ್ರಶಾಂತ್ ಪಾಟೀಲ್ ಮಾತನಾಡಿ, ವರಿಷ್ಠರಿಂದ ನಮಗೆ ನ್ಯಾಯ ಒದಗಿಸಿಕೊಡುವ ಭರವಸೆ ಸಿಕ್ಕಿದೆ. ಪೊಲೀಸ್ ಅಧಿಕಾರಿಗಳಿಂದ ಭರವಸೆ ಸಿಕ್ಕ ನಂತರ ಮೃತದೇಹ ಪಡೆದಿದ್ದೇವೆ. ಪ್ರಕರಣದ ಆರೋಪಿಗಳಿಗೆ ಸೂಕ್ತ ಶಿಕ್ಷೆ ಆಗಬೇಕು. ಹಿರಿಯ ಪೊಲೀಸ್ ಅಧಿಕಾರಿಗಳು ನ್ಯಾಯ ಒದಗಿಸುವ ಆಶ್ವಾಸನೆ ಕೊಟ್ಟಿದ್ದಾರೆ. ಮುಂದಿನ ನಡೆಗಳ ಬಗ್ಗೆ ಬೆಳಗಾವಿಗೆ ಹೋದ ನಂತರ ತೀರ್ಮಾನ ಮಾಡ್ತೀವಿ. ಅಂತ್ಯ ಸಂಸ್ಕಾರದ ಬಗ್ಗೆ ಈಗಲೇ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕೈ ನಾಯಕರಿಂದ ಗುತ್ತಿಗೆದಾರನ ಕುಟುಂಬಸ್ಥರಿಗೆ ಸಾಂತ್ವನ, ಉದ್ಯೋಗದ ಭರವಸೆ
ತನಿಖೆ ಆಗುತ್ತಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಪ್ರಕರಣದ ತನಿಖೆ ನಡೆಸುತ್ತೇವೆ. ಮೃತರ ಶರೀರವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದೇವೆ. ಕುಟುಂಬದವರು ಶವವನ್ನು ಬೆಳಗಾವಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಹಾಗೆಯೇ ಉಡುಪಿ ಜಿಲ್ಲಾ ಪೊಲೀಸ್ ಬೆಳಗಾವಿವರೆಗೂ ತೆರಳಲಿದ್ದಾರೆ. ರಾತ್ರಿ ಮತ್ತು ಮಳೆಯ ವಾತಾವರಣ ಇರುವುದರಿಂದ ಪೊಲೀಸ್ ಭದ್ರತೆಯಲ್ಲಿ ಕಳುಹಿಸಲಾಗುತ್ತಿದೆ. ಸೂಕ್ತ ತನಿಖೆ ಮಾಡುವುದಾಗಿ ಕುಟುಂಬಕ್ಕೆ ಹೇಳಿದ್ದೇವೆ ಎಂದು ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.