ಉಡುಪಿ: ಇಲ್ಲಿಯ ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು, ಬೆಳಗಾವಿ ಪೊಲೀಸರ ಸಹಕಾರದಿಂದ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರವೀಣ್ ಅರುಣ್ ಚೌಗಲೆ(35) ಬಂಧಿತ ಆರೋಪಿ.
ಬೆಳಗಾವಿಯ ಕುಡುಚಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಪ್ರವೀಣ್, ಮಂಗಳೂರು ಏರ್ಪೋರ್ಟ್ನಲ್ಲಿ ಸೆಕ್ಯೂರಿಟಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದು, ಸದ್ಯಕ್ಕೆ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಂಧಿತ ಆರೋಪಿ ಮಹಾರಾಷ್ಟ್ರದ ಸಾಂಗ್ಲಿ ಮೂಲದವನಾಗಿದ್ದಾನೆ ಎಂದು ತಿಳಿದು ಬಂದಿದೆ. ಕುಡಚಿಯಲ್ಲಿರುವ ಸಂಬಂಧಿಕರೊಬ್ಬರ ಮನೆಯಲ್ಲಿ ಆರೋಪಿ ಅವಿತುಕೊಂಡಿದ್ದು, ಮೊಬೈಲ್ ಲೊಕೇಶನ್ ಆಧರಿಸಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಉಡುಪಿ: ತಾಯಿ, ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಇದನ್ನೂ ಓದಿ: ಉಡುಪಿ: ನಾಲ್ವರ ಕೊಲೆ ಪ್ರಕರಣ, ಶಂಕಿತ ಆರೋಪಿ ಕರೆದೊಯ್ದ ಬಗ್ಗೆ ಆಟೋ ಚಾಲಕ ಹೇಳಿದ್ದೇನು? |
ನವೆಂಬರ್ 12ರಂದು ಮನೆಗೆ ಬಂದಿದ್ದ ದುಷ್ಕರ್ಮಿ ಪ್ರವೀಣ್, ಒಂದೇ ಕುಟುಂಬದ ನಾಲ್ವರಿಗೆ ಚೂರಿ ಇರಿದು ಭೀಕರವಾಗಿ ಕೊಲೆ ಮಾಡಿದ್ದ. ತಾಯಿ ಹಸೀನಾ (46) ಮತ್ತು ಮಕ್ಕಳಾದ ಅಫ್ನಾನ್ (23), ಅಯ್ನಾಝ್ (21), ಆಸಿಂ (12) ಚೂರಿ ಇರಿತದಿಂದ ಮೃತಪಟ್ಟಿದ್ದರು. ಪ್ರಕರಣ ಉಡುಪಿ ಜಿಲ್ಲೆಯನ್ನು ಬೆಚ್ಚಿ ಬೀಳಿಸಿತ್ತು. ಈ ಮನೆಯ ಯಜಮಾನ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಮನೆಯಲ್ಲಿ ಮೂವರು ಮಕ್ಕಳೊಂದಿಗೆ ತಾಯಿ ಮತ್ತು ವೃದ್ಧೆಯೊಬ್ಬರು ವಾಸವಿದ್ದರು. ಈ ವೇಳೆ ಮನೆಗೆ ನುಗ್ಗಿ ಕೃತ್ಯ ಎಸಗಿ ದುಷ್ಕರ್ಮಿ ಪರಾರಿಯಾಗಿದ್ದನು.
ಕೊಲೆ ನಡೆದ ದಿನ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್, ಉಡುಪಿಯ ನೇಜಾರುವಿನ ತೃಪ್ತಿನಗರದಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಮಾಡಲಾಗಿದೆ. ಈ ಸಂಬಂಧ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತದೆ. ನಾಲ್ವರನ್ನು ಕೊಲೆ ಮಾಡಿ, ಮನೆಯ ಯಜಮಾನಿಯ ಅತ್ತೆಗೂ ಗಾಯಗೊಳಿಸಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯಲ್ಲಿ ಯಾವುದೇ ವಸ್ತು ಕಳ್ಳತನವಾದ ಬಗ್ಗೆ ಸಾಕ್ಷ್ಯ ಸಿಕ್ಕಿಲ್ಲ. ಕೊಲೆಯ ಹಿಂದಿನ ಕಾರಣ ತನಿಖೆಯ ಬಳಿಕ ತಿಳಿದು ಬರಲಿದೆ ಎಂದು ತಿಳಿಸಿದ್ದರು.