ಉಡುಪಿ: ಉದ್ಯಮಿ ಬಿ.ಆರ್.ಶೆಟ್ಟಿ ಅವರ ಬಿ.ಆರ್.ಎಸ್. ಹೆಲ್ತ್ ಕೇರ್ ಕಂಪನಿ ಆಸ್ಪತ್ರೆಯನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ಮಾಡುವ ವಿಚಾರಕ್ಕೆ ಉಡುಪಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯಿಸಿದ್ದಾರೆ.
ಬಿ.ಆರ್.ಶೆಟ್ಟಿಯವರ ಕಂಪನಿ ಅರ್ಧಕ್ಕೆ ಕೈ ಕೊಡುತ್ತೆ ಅನ್ನೋದು ನಮಗೆ ಮೊದಲೇ ಗೊತ್ತಿತ್ತು. ಹಾಗಾಗಿ ಈ ಕುರಿತು ಸಾಕಷ್ಟು ಹೋರಾಟ ನಡೆಸಿಕೊಂಡು ಬಂದಿದ್ದೆವು. ನಮ್ಮ ವಿರೋಧದ ಹೊರತಾಗಿಯೂ ಸಿದ್ದರಾಮಯ್ಯ ಸರ್ಕಾರ ಆಸ್ಪತ್ರೆಯನ್ನು ಬಿ.ಆರ್.ಶೆಟ್ಟರಿಗೆ ವಹಿಸಿತ್ತು. ಇದೀಗ ಬಡವರ ಆಸ್ಪತ್ರೆಯನ್ನು ನಡು ನೀರಲ್ಲಿ ಕೈ ಬಿಡಲಾಗಿದೆ. ಆಸ್ಪತ್ರೆಗೆ ಶೀಘ್ರ ಹೊಸ ಸರ್ಕಾರಿ ವೈದ್ಯರ ನೇಮಕ ಮಾಡಲಾಗುವುದು. ಈಗಾಗಲೇ ವೈದ್ಯರ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಗಲ್ಫ್ ರಾಷ್ಟ್ರಗಳಲ್ಲಿ ಬಿ.ಆರ್.ಶೆಟ್ಟಿ ಸ್ಥಾಪಿಸಿದ್ದ ಆರ್ಥಿಕ ಸಾಮ್ರಾಜ್ಯ ಕುಸಿಯುತ್ತಿದ್ದು, ಈ ಕುಸಿತದ ಪರಿಣಾಮ ಅವರ ತವರು ಜಿಲ್ಲೆ ಉಡುಪಿಯಲ್ಲೂ ಕಾಣಿಸುತ್ತಿದೆ. ತನ್ನ ಹೆತ್ತವರ ನೆನಪಿನಲ್ಲಿ ಸರ್ಕಾರದ ಜಾಗವನ್ನು ಪಡೆದು ಉಚಿತ ಆಸ್ಪತ್ರೆ ಸ್ಥಾಪಿಸಬೇಕು ಎಂದುಕೊಂಡಿದ್ದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ಮುತುವರ್ಜಿಯಲ್ಲಿ ಉಡುಪಿಯ ಸರ್ಕಾರಿ ಹೆರಿಗೆ ಆಸ್ಪತ್ರೆಯನ್ನು ಶೆಟ್ಟಿಯವರಿಗೆ ವಹಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಶೆಟ್ಟಿಯವರಿಗೆ ಒಂದು ಮಲ್ಟಿ ಸ್ಪೆಷಲ್ ಆಸ್ಪತ್ರೆಯನ್ನು ನಡೆಸಲು ಸರ್ಕಾರಿ ಭೂಮಿಯನ್ನು ಬಿಟ್ಟು ಕೊಡಲಾಗಿತ್ತು.