ಉಡುಪಿ : ಪರಸ್ಪರ 13 ವರ್ಷ ಪ್ರೀತಿಸಿ ಮದುವೆಯ ದಿನ ಮಂಟಪಕ್ಕೆ ಬಾರದೆ ಪ್ರಿಯಕರ ನಾಪತ್ತೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ.
ಮಣಿಪಾಲದ ಮಮತಾ ಮತ್ತು ಪರ್ಕಳದ ಗಣೇಶ್ ಎಂಬುವರು ಪರಸ್ಪರ ಪ್ರೀತಿಸುತ್ತಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ನಡುವೆ 13 ವರ್ಷದ ಹಿಂದೆ ಪ್ರೇಮಾಂಕುರವಾಗಿತ್ತು. ಮದುವೆಯಾಗುವುದಾಗಿ ನಂಬಿಸಿ 13 ವರ್ಷ ದೂಡಿದ್ದ ಪ್ರೇಮಿ, ಯುವತಿಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಎರಡು ಬಾರಿ ಅಬಾರ್ಷನ್ ಕೂಡ ಮಾಡಿಸಿದ್ದ.
ಆದ್ರೆ, ನವೆಂಬರ್ ನಾಲ್ಕಕ್ಕೆ ಬೇರೆ ಹುಡುಗಿಯನ್ನು ಮದುವೆಯಾಗಲು ಮುಹೂರ್ತ ಕೂಡ ಫಿಕ್ಸ್ ಮಾಡಿಕೊಂಡಿದ್ದ. ಈ ವಿಚಾರ ತಿಳಿದ ಮಮತಾ ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪೊಲೀಸರ ಮಧ್ಯಪ್ರವೇಶದ ನಂತರ ನವೆಂಬರ್ 6ಕ್ಕೆ ಮದುವೆಯಾಗುವುದಾಗಿ ಗಣೇಶ್ ಒಪ್ಪಿದ್ದ.
ಇತ್ತ ಮದುವೆಯ ಸಂಭ್ರಮದಲ್ಲಿದ್ದ ಯುವತಿಯ ಮನೆಯವರು ಎಲ್ಲ ಶಾಸ್ತ್ರಗಳನ್ನು ಮಾಡಿ ಮುಗಿಸಿದ್ದರು. ಮದರಂಗಿ ಚಿತ್ತಾರದಲ್ಲಿ ಅಲಂಕೃತಳಾಗಿ ಹಸಮಣೆ ಏರುವ ತವಕದಲ್ಲಿದ್ದ ಯುವತಿ ಮದುವೆ ಮಂಟಪಕ್ಕೆ ಬಂದಾಗ ಪ್ರಿಯತಮ ಕೈಕೊಟ್ಟು ಪರಾರಿಯಾಗಿದ್ದ. ಇದರಿಂದ ಮಮತಾಗೆ ಆಕಾಶವೇ ಕುಸಿದು ಬಿದ್ದಂತಾಗಿತ್ತು.
ಆಕ್ರೋಶಗೊಂಡ ಮಮತಾ ಯುವಕನ ಮನೆ ಸೇರಿದಂತೆ ಸಂಬಂಧಿಕರ ಮನೆಯನ್ನೆಲ್ಲ ಪ್ರಿಯಕರನಿಗಾಗಿ ಜಾಲಾಡಿದ್ದಾಳೆ. ಒಂದು ದಿನ ಕಳೆದರೂ ಪ್ರಿಯಕರ ಬಾರದ ಹಿನ್ನೆಲೆ ರೋಸಿಹೋದ ಯುವತಿ ಗಣೇಶನ ಮನೆಯ ಮುಂದೆ ನ್ಯಾಯಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾಳೆ.