ಉಡುಪಿ: ಜಿಲ್ಲಾ ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾಕೂಟ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಮೂರು ದಿನಗಳ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಅಂತಾರಾಷ್ಟ್ರೀಯ ಕ್ರೀಡಾಪಟು ಅಭಿನ್ ದೇವಾಡಿಗ, ಬಲೂನ್ ಗಳನ್ನು ಹಾರಿಬಿಡುವ ಮೂಲಕ ಉದ್ಘಾಟಿಸಿದರು.
ಕ್ರೀಡಾಕೂಟದ ಉದ್ಘಾಟನೆಗೂ ಮೊದಲು ಪೊಲೀಸ್ ಇಲಾಖೆಯ ವಿವಿಧ ವಿಭಾಗದ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಅತಿಥಿಗಳು, ಸಾಮೂಹಿಕ ಗೌರವ ರಕ್ಷೆ ಸ್ವೀಕರಿಸಿದರು. ಬಳಿಕ ಕ್ರೀಡಾ ಜ್ಯೋತಿ ಪ್ರದರ್ಶನ ನಡೆಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಮಾತನಾಡಿ, ಪೊಲೀಸ್ ಸಿಬ್ಬಂದಿಗೆ ಕ್ರಿಡಾ ಸ್ಫೂರ್ತಿ ಹೆಚ್ಚಿಸಬೇಕು. ಜೊತೆಗೆ ಅವರಲ್ಲಿ ಅಡಗಿರುವ ಕ್ರಿಡಾ ಮನೋಭಾವ ಹೆಚ್ಚಿಸಲು ಜಿಲ್ಲಾ ಪೊಲೀಸ್ ಇಲಾಖೆಯಿಂದ ಪ್ರತಿ ವರ್ಷ ಕ್ರೀಡಾಕೂಟ ಆಯೋಜಿಸಲಾಗುತ್ತದೆ. ಕೋವಿಡ್-19 ಹಿನ್ನೆಲೆಯಲ್ಲಿ ಕ್ರೀಡಾಕೂಟವನ್ನು ಈಗ ನಡೆಸಲಾಗುತ್ತಿದೆ. ಹೀಗಾಗಿ ಪ್ರತಿಯೋಬ್ಬರೂ ಮಾ. 4 ರಿಂದ 6 ರವರೆಗೆ ಜರುಗುವ ಈ ಕ್ರೀಡಾಕೂಟದ ವಿವಿಧ ಕ್ರಿಡೆಗಳಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಎಂದು ಕರೆ ನೀಡಿದರು.