ಉಡುಪಿ: ವೈದ್ಯರ ನಿರ್ಲಕ್ಷ್ಯದಿಂದ ರೋಗಿಗಳು ಮೃತಪಟ್ಟರೆ ಅಂತಹ ವೈದ್ಯರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳು 2020ರ ಕಾಯ್ದೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ಲಕ್ಷಣವಿದ್ದರೆ ತಾತ್ಕಾಲಿಕ ಉಪಶಮನ ಚಿಕಿತ್ಸೆ ನೀಡಬೇಡಿ. ಸೋಂಕಿನ ಬಗ್ಗೆ ಪರೀಕ್ಷೆ ಮಾಡಿಸಿ ವರದಿ ಪಡೆಯಿರಿ. ಕ್ಲಿನಿಕ್ಗಳಲ್ಲಿ ರೋಗಿಗಳಿಗೆ ತಾತ್ಕಾಲಿಕ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ರೋಗ ಉಲ್ಬಣಗೊಳ್ಳುತ್ತಿದೆ. ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಳವಾಗುತ್ತಿದೆ. ಸೋಂಕಿತರು ಕೊನೆಯ ಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
ಪ್ರಾರಂಭದಲ್ಲಿ ಸ್ಥಳೀಯ ಕ್ಲಿನಿಕ್/ಡಾಕ್ಟರ್ ಹತ್ತಿರ ಹೋಗ್ತಾರೆ. ಜ್ವರ, ಶೀತ, ಕೆಮ್ಮುಗಳಿಗೆ ಕ್ಲಿನಿಕ್ ನಲ್ಲಿ ಔಷಧ ಪಡೆಯುತ್ತಿದ್ದಾರೆ. ಮರಣ ಪ್ರಮಾಣ ಹೆಚ್ಚಲು ಇದೇ ಕಾರಣವಾಗುತ್ತಿದೆ. ಕೋವಿಡ್ ದೃಢಪಟ್ಟಲ್ಲಿ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಬಹುದು ಎಂದು ಡಿಸಿ ಹೇಳಿದರು.
ಹೋಂ ಐಸೋಲೇಷನ್ ನಲ್ಲಿರುವವರ ಮನೆಗಳ ಸೀಲ್ ಡೌನ್
ಜಿಲ್ಲಾಧಿಕಾರಿ ಜಿ. ಜಗದೀಶ ಅವರ ನೇತೃತ್ವದಲ್ಲಿ ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರಿರುವ ಮನೆಯ ಸುತ್ತ ಎಚ್ಚರಿಕೆ ಸೂಚಿಸುವ ಟೇಪ್ (ಪಟ್ಟಿ) ಕಟ್ಟಲಾಯಿತು. ಮನೆಯಲ್ಲಿದ್ದ ಸೋಂಕಿತರ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಲಾಯಿತು. ಹೊರಗೆ ಬಾರದೇ ಮನೆಯಲ್ಲಿಯೇ ಇದ್ದು, ಆರೋಗ್ಯದ ಬಗ್ಗೆ ನಿಗಾ ಇಡುವಂತೆ ಸೂಚಿಸಲಾಯಿತು.
ಜಿಲ್ಲಾದ್ಯಂತ ಕೋವಿಡ್ ಪಾಸಿಟಿವ್ ಬಂದು ಮನೆಗಳಲ್ಲಿಯೇ ಐಸೋಲೇಷನ್ ಆದವರ ಮನೆಗಳನ್ನು ಸೀಲ್ ಡೌನ್ ಮಾಡುವ ಕಾರ್ಯಾಚರಣೆ ಶುರುವಾಗಿದೆ. ಕೋವಿಡ್ ಮೊದಲ ಅಲೆಯ ವೇಳೆ ಚಾಲ್ತಿಯಲ್ಲಿದ್ದ ಈ ಕ್ರಮವನ್ನು ಎರಡನೇ ಅಲೆಯ ಸಂದರ್ಭದಲ್ಲಿ ಕೈ ಬಿಡಲಾಗಿತ್ತು. ಇದರಿಂದ ಸೋಂಕಿತರು ಯಾವ ಮನೆಗಳಲ್ಲಿದ್ದಾರೆ? ಆ ಮನೆಗಳವರು ಹೊರಗೆ ಪೇಟೆಗಳಲ್ಲಿ ತಿರುಗಾಡುತ್ತಿದ್ದಾರೆಯೇ ಎಂಬುದು ಯಾರಿಗೂ ತಿಳಿಯುತ್ತಿರಲಿಲ್ಲ. ಇವೆಲ್ಲದಕ್ಕೂ ಕಡಿವಾಣ ಹಾಕಲು, ಗ್ರಾಮಗಳನ್ನು ಕೋವಿಡ್ ಮುಕ್ತ ಮಾಡಲು ಈ ಸೀಲ್ ಡೌನ್ ಕ್ರಮವನ್ನು ಮುಂದುವರಿಸಲಾಗಿದೆ ಎಂದು ತಿಳಿಸಿದರು.