ಉಡುಪಿ: ಜಿಲ್ಲೆಯಲ್ಲಿ ಆತಂಕ ಮೂಡಿಸಿದ್ದ ತೆಕ್ಕಟ್ಟೆ ಪ್ರಕರಣ ಸುಖಾಂತ್ಯ ಕಂಡಿದೆ. ಕೊರೊನಾ ಸೋಂಕಿತನ ಸಂಪರ್ಕಕ್ಕೆ ಬಂದಿದ್ದ ಎಲ್ಲಾ 18 ವರದಿ ನೆಗೆಟಿವ್ ಬಂದಿವೆ.
ಮಂಡ್ಯ ಮೂಲದ ವ್ಯಕ್ತಿ ಮುಂಬೈನಿಂದ ತೆಕ್ಕಟ್ಟೆ ಮಾರ್ಗವಾಗಿ ತೆರಳಿದ್ದು, ಇವರಿಗೆ ಮುಂಬೈನಲ್ಲಿ ಕೊರೊನಾ ಸೋಂಕು ತಗುಲಿತ್ತು. ಈ ವ್ಯಕ್ತಿ ಇದ್ದ ಖರ್ಜೂರದ ಲಾರಿ ತೆಕ್ಕಟ್ಟೆ ಪರಿಸರದಲ್ಲಿ ವಿಶ್ರಾಂತಿ ಪಡೆಯಲು ನಿಂತಿತ್ತು. ತೆಕ್ಕಟ್ಟೆ ಪೆಟ್ರೋಲ್ ಪಂಪ್ ಪರಿಸರದಲ್ಲಿ ಇವರು ಸ್ನಾನ ಮಾಡಿ ಉಪಹಾರ ಸ್ವೀಕರಿಸಿ ಹೋಗಿದ್ದರು. ಬಳಿಕ ಇಲ್ಲಿನ ಟೋಲ್ಗೇಟ್ನಲ್ಲಿ ಕೆಲ ಹೊತ್ತು ನಿಂತು ತೆರಳಿದ್ದರು. ಇವರ ಸಂಪರ್ಕಕ್ಕೆ ಬಂದಿರುವ ಟೋಲ್ಗೇಟ್ ಮತ್ತು ಪೆಟ್ರೋಲ್ ಪಂಪ್ ಸಿಬ್ಬಂದಿ ತಪಾಸಣೆ ಮಾಡಲಾಗಿತ್ತು.
ಇಂದು ಆ 18 ಜನರ ಕೊರೊನಾ ಪರೀಕ್ಷಾ ವರದಿ ಕೈ ಸೇರಿದೆ. ಪರೀಕ್ಷೆಗೊಳಪಟ್ಟ18 ಜನರ ವರದಿಯು ನೆಗೆಟಿವ್ ಬಂದಿದೆ. ಪಾಸಿಟಿವ್ ವ್ಯಕ್ತಿ ಬಳಸಿದ್ದ ಬಾತ್ರೂಮ್ ಮತ್ತು ಟಾಯ್ಲೆಟ್ ಉಪಯೋಗಿಸಿದವರಿಗೂ ವರದಿ ನೆಗೆಟಿವ್ ಎಂದು ಬಂದಿದೆ. ತೆಕ್ಕಟ್ಟೆಯ ಘಟನೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಆತಂಕ ಮನೆ ಮಾಡಿತ್ತು. ಪರಿಣಾಮ ಪೆಟ್ರೋಲ್ ಪಂಪ್ ಮತ್ತು ಟೋಲ್ಗೇಟ್ ಪ್ರದೇಶವನ್ನು ಜಿಲ್ಲಾಡಳಿತ ಸೀಲ್ಡೌನ್ ಮಾಡಿತ್ತು. ಜೊತೆಗೆ ಆ ಪ್ರದೇಶಕ್ಕೆ ರಾಸಾಯನಿಕ ಸಿಂಪಡನೆ ಮಾಡಿ ಜಿಲ್ಲಾಡಳಿತ ಸುರಕ್ಷತಾ ಕ್ರಮಕೈಗೊಂಡಿತ್ತು. ಸದ್ಯ ಎಲ್ಲಾ ವರದಿ ನೆಗೆಟಿವ್ ಬಂದ ಕಾರಣ ಉಡುಪಿ ಜಿಲ್ಲೆಯೀಗ ನಿರಾಳವಾಗಿದೆ.