ಉಡುಪಿ: ಕರಾವಳಿ ಜಿಲ್ಲೆ ಉಡುಪಿ, ಒಂದು ಕಾಲದಲ್ಲಿ ಕಾಂಗ್ರೆಸ್ನ ಭದ್ರಕೋಟೆ ಆಗಿತ್ತು ಅನ್ನೋದು ರಾಜ್ಯ ರಾಜಕಾರಣದ ಬಗ್ಗೆ ಗೊತ್ತಿದ್ದವರು ಯಾರಾದ್ರೂ ಹೇಳ್ತಾರೆ. ಆದ್ರೆ ಈಗ ಮಾತ್ರ ಉಡುಪಿಯಲ್ಲಿ ಕಾಂಗ್ರೆಸ್ ಅರಸರಿಲ್ಲದ ಸಂಸ್ಥಾನವಾಗಿದೆ.
ಹೌದು, ಉಡುಪಿ - ಚಿಕ್ಕಮಗಳೂರು ಕ್ಷೇತ್ರವನ್ನು ಮೈತ್ರಿ ಧರ್ಮಕ್ಕೆ ಒತ್ತೆ ಇಟ್ಟ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ. ಪಕ್ಷದೊಳಗೆ ಆಕ್ರೋಶ ಮುಗಿಲುಮುಟ್ಟಿದೆ.ಇನ್ನೊಂದೆಡೆ ಕಾರ್ಯಕರ್ತರಿಲ್ಲದ ಜೆಡಿಎಸ್ ಅಭ್ಯರ್ಥಿಗಾಗಿ ಉಡುಪಿಯಲ್ಲಿ ಹುಡುಕಾಡುತ್ತಿದೆ.
ಇನ್ನು ಈ ಲೋಕಸಭಾ ಚುನಾವಣೆಯ ಅತೀ ದೊಡ್ಡ ತಮಾಷೆ ಯಾವುದು ಗೊತ್ತಾ, ಉಡುಪಿ - ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಬದಲು ಜೆಡಿಎಸ್ ಸ್ಪರ್ಧಿಸ್ತಿರೋದು.
ಆಸ್ಕರ್ ಫೆರ್ನಾಂಡೀಸ್ರಂತಹಾ ನಾಯಕರು ಸತತ ಐದು ಬಾರಿ ಲೋಕ ಸಭೆಗೆ ಪ್ರವೇಶಿಸಿದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಅಭ್ಯರ್ಥಿ ಇಲ್ಲದೆ ಬಾಗಿಲು ಹಾಕಿ ಕುಳಿತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೈತ್ರಿ ಸಂಧಾನಕ್ಕೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಒತ್ತೆ ಇಟ್ಟ ಮೇಲಂತೂ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಮುಗಿಲುಮುಟ್ಟಿದೆ. ಕಳೆದ ಭಾನುವಾರವಷ್ಟೇ ಪರಿವರ್ತನಾ ಯಾತ್ರೆ ನಡೆಸಿ ಮೆರೆದಾಡಿದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಸಮಾವೇಶ ನಡೆದ ನಾಲ್ಕೇ ದಿನದಲ್ಲಿ ಮುಖಭಂಗ ಮಾಡಿಸಿಕೊಂಡಿದ್ದಾರೆ. ಹಾಗಾಗಿ ಪಕ್ಷದ ಕಚೇರಿ ಮುಂದೆ ಟಯರ್ಗೆ ಬೆಂಕಿ ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದೂ ಆಗಿದೆ.
ಬುಧವಾರ ಸಂಜೆಯವರೆಗೂ ಜಿಲ್ಲಾ ಕಾಂಗ್ರೆಸ್ಗೆ ಜೆಡಿಎಸ್ ಸ್ಪರ್ಧೆಯ ಅರಿವೇ ಇರಲಿಲ್ಲ. ಸ್ಥಳೀಯ ಜಿಲ್ಲಾ ಮಟ್ಟದ ನಾಯಕರ ಜೊತೆಗೆ ಚರ್ಚಿಸದೆ ಕೈಗೊಂಡ ನಿರ್ಧಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗಿದೆ. ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯ ಕುಮಾರ್ ಸೊರಕೆ, ಎಐಸಿಸಿ ಸದಸ್ಯ ಅಮೃತ್ ಶೆಣೈ, ಎನ್ಆರ್ಐ ಸೆಲ್ನ ಮುಖ್ಯಸ್ಥೆ ಹಾಗೂ ರಾಹುಲ್ ಗಾಂಧಿ ನಿಕಟವರ್ತಿ ಆರತಿ ಕೃಷ್ಣ ಕಾಂಗ್ರೆಸ್ನಿಂದ ಪೈಪೋಟಿಯಲ್ಲಿದ್ರು. ಆದ್ರೆ ಅಭ್ಯರ್ಥಿಯೇ ನಿಲ್ಲಿಸಲ್ಲ ಎಂದು ನಿರ್ಧಾರವಾದ ಮೇಲೆ ಕಾಂಗ್ರೆಸ್ ಪಾಳಯದಲ್ಲಿ ಸೂತಕದ ಚಾಯೆ ಮೂಡಿದೆ. ಪಕ್ಷದ ವರಿಷ್ಟ ಆಸ್ಕರ್ ಫೆರ್ನಾಂಡೀಸ್ ಅನಾರೋಗ್ಯದ ಕಾರಣ ‘ಡಿಸಿಶನ್ ಮೇಕಿಂಗ್’ ಸಂದರ್ಭ ಅವರು ಭಾಗವಹಿಸಿರಲಿಲ್ಲ. ಹಾಗಾಗಿ ಕರಾವಳಿಯಲ್ಲಿ ಕಾಂಗ್ರೆಸ್ ನೆಲಕಚ್ಚಲು ಕಾರಣವಾಗಿದೆ. ಇನ್ನು ಮೈತ್ರಿ ನಿರ್ಧಾರವನ್ನು ಮರುಪರಿಶೀಲಿಸಲೇಬೇಕು ಇಲ್ಲವಾದ್ರೆ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗುತ್ತೆ ಎಂದು ಸ್ಥಳೀಯ ನಾಯಕರು ಎಚ್ಚರಿಸಿದ್ದಾರೆ.
ಜೆಡಿಎಸ್ನ ಗಾಳಿ ಇಲ್ಲದ ಉಡುಪಿಯಲ್ಲಿ ಅಭ್ಯರ್ಥಿನೂ ಇಲ್ಲ ಕಾರ್ಯಕರ್ತನೂ ಇಲ್ಲ. ಇನ್ನು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಜಯಪ್ರಕಾಶ ಹೆಗ್ಡೆ ಮೈತ್ರಿ ಅಭ್ಯರ್ಥಿಯಾಗಿ ಬಂದ್ರೂ ಪಕ್ಷದೊಳಗೆ ವ್ಯಾಪಕ ವಿರೋಧ ವ್ಯಕ್ತವಾಗಲಿದೆ. ಫೈನಲಿ ಕರಾವಳಿ ಜಿಲ್ಲೆಯಾದ ಉಡುಪಿ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯ ಹಾದಿಯಂತೂ ನಿರಾತಂಕವಾಗಿ ಸುಗಮವಾಗಿದೆ.