ಉಡುಪಿ : ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದ ಜೋಡಿ ಆತ್ಮಹತ್ಯೆ ಪ್ರಕರಣದಲ್ಲಿ ಬ್ರಹ್ಮಾವರ ಠಾಣಾ ಪೊಲೀಸರು ಯುಡಿಆರ್ ದಾಖಲು ಮಾಡಿಕೊಂಡಿದ್ದು, ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಅಸಹಜ ಸಾವಿನಂತೆ ಕಂಡುಬಂದರೂ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಉಡುಪಿ ಎಎಸ್‌ಪಿ ಸಿದ್ದಲಿಂಗಪ್ಪ ಹೇಳಿದ್ದಾರೆ.
ದಿನಾಂಕ ಮೇ 21ರಂದು ಮಂಗಳೂರಿನಿಂದ ಬಾಡಿಗೆ ಕಾರು ಪಡೆದುಕೊಂಡು ಬಂದಿದ್ದ ಯಶವಂತ್ ಯಾದವ್ ಮತ್ತು ಜ್ಯೋತಿ ಭಟ್ಕಳಕ್ಕೆ ತೆರಳಿದ್ದರು. ಬಳಿಕ ಅಲ್ಲಿಂದ ಮಂದಾರ್ತಿಗೆ ತೆರಳಿದ್ದ ಜೋಡಿ, ತಾವು ಬಾಡಿಗೆ ಪಡೆದುಕೊಂಡು ಬಂದಿದ್ದ ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಆತ್ಮಹತ್ಯೆ ಮಾಡಿಕೊಂಡ ಯಶವಂತ್ ಯಾದವ್ ತನ್ನ ಸಹೋದರನಿಗೆ ಸಂದೇಶ ಕಳುಹಿಸಿದ್ದು, ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಜೊತೆಗೆ ಈ ಜೋಡಿಯು ಮಂಗಳೂರಿನಲ್ಲಿ ಬಾಡಿಗೆ ಮನೆಯನ್ನು ಪಡೆಯಲು ಮುಂಗಡ ಹಣ ಮತ್ತು ತಮ್ಮ ದಾಖಲಾತಿಗಳನ್ನು ಮನೆ ಮಾಲೀಕರಿಗೆ ನೀಡಿರುವುದು ತನಿಖೆ ವೇಳೆ ಪತ್ತೆಯಾಗಿದೆ.
ಯಶವಂತ್ ಯಾದವ್ ಮರಾಠ ಸಮುದಾಯಕ್ಕೆ ಸೇರಿದದನಾಗಿದ್ದು,ಯುವತಿ ಜ್ಯೋತಿ ಪರಿಶಿಷ್ಟ ಜಾತಿಗೆ ಸೇರಿದವಳಾಗಿದ್ದಳು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಬಗ್ಗೆ ಇಬ್ಬರ ಮನೆಯಲ್ಲೂ ಅಸಮಾಧಾನವಿತ್ತು. ತಮ್ಮ ಭವಿಷ್ಯದ ಬಗ್ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು,ಹೆಚ್ಚಿನ ತನಿಖೆಯ ಬಳಿಕ ನಿಜ ಸಂಗತಿ ತಿಳಿದು ಬರಲಿದೆ.