ಉಡುಪಿ: ಮಾರುಕಟ್ಟೆಯಲ್ಲಿ ಚೀನಿ ಗೂಡು ದೀಪಗಳ ಹಾವಳಿ ನಡುವೆಯೂ ದೀಪಾವಳಿ ಹಬ್ಬಕ್ಕಾಗಿ ನಗರದ ಹೆಣ್ಣು ಮಕ್ಕಳ ತಂಡವೊಂದು ಸಾಂಪ್ರದಾಯಿಕ ಗೂಡು ದೀಪಗಳನ್ನು ತಯಾರಿಸಿ ತಮ್ಮ ಕೌಶಲ್ಯತೆಗೆ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.
ಕೆಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಚೀನಿ ಗೂಡು ದೀಪಗಳ ಹಾವಳಿ ಹೆಚ್ಚಿತ್ತು. ಆದರೆ ಚೀನಿ ವಸ್ತುಗಳನ್ನು ದೇಶಿ ಗೂಡು ದೀಪಗಳು ಹಿಂದಾಕುವ ಮೂಲಕ ಸಾಂಪ್ರದಾಯಿಕ ಗೂಡು ದೀಪಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದೇ ಬೇಡಿಕೆ ಅರಿತ ಉಡುಪಿ ಹೆಣ್ಣು ಮಕ್ಕಳ ತಂಡವೊಂದು ಕಳೆದ ಐದಾರು ವರ್ಷಗಳಿಂದ ಸಾಂಪ್ರದಾಯಿಕ ಗೂಡು ದೀಪಗಳನ್ನು ತಯಾರಿಸುವ ಮೂಲಕ ಬೇಡಿಕೆ ಹೆಚ್ಚಿಸಿಕೊಂಡಿದೆ.
ನಾಲ್ಕೈದು ತಿಂಗಳ ಹಿಂದೆ ಈ ಹೆಣ್ಣು ಮಕ್ಕಳು ಬಿದಿರಿನ ಗೂಡು ದೀಪ ಕಟ್ಟೊಕೆ ಶುರು ಮಾಡಿದ್ದಾರೆ. ಸಂಪೂರ್ಣ ಪ್ಲಾಸ್ಟಿಕ್ ರಹಿತವಾಗಿ ತಯಾರಿಯಾಗುವ ಗೂಡು ದೀಪ ಅಪ್ಪಟ ಮಂಟಪ ಶೈಲಿಯನ್ನು ಹೋಲುತ್ತದೆ. ದೀಪದ ಒಳಗೆ 2 ಬಿದಿರು ಪಟ್ಟಿ ಇರಿಸಿ ಹಣತೆ ಮತ್ತು ಲೈಟ್ ಉರಿಸುವ ಮೂಲಕ ಗ್ರಾಹಕರನ್ನು ಹೆಚ್ಚಿಸಿಕೊಂಡಿದ್ದಾರೆ. ಅಲ್ಲದೆ ಬಣ್ಣ ಬಣ್ಣದ ಕಾಗದಗಳನ್ನು ಬಳಸಿ ಗಮ್ನಿಂದ ಜೋಡಿಸಿ ತಯಾರಿಸುವ ಗೂಡು ದೀಪ ನಿಜಕ್ಕೂ ದೀಪಗಳ ಹಬ್ಬಕ್ಕೆ ಒಳ್ಳೆಯ ಕಳೆ ಕಟ್ಟುವುದರಲ್ಲಿ ಸಂಶಯವಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.