ಉಡುಪಿ: ಸರ್ಕಾರ ಇಂದಿನಿಂದ 9 ಮತ್ತು 10 ನೇ ತರಗತಿಗಳನ್ನು ಆರಂಭಿಸಿದೆ. ಅದರಂತೆ ಇಲ್ಲಿನ ಪ್ರೌಢ ಶಾಲೆಯೂ ಪ್ರಾರಂಭವಾಗಿದ್ದು, ಯಾವುದೇ ಸಮಸ್ಯೆ ಆಗಲಿಲ್ಲ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ತೆರಳಿದ್ದಾರೆ ಎಂದು ಶಾಸಕ ರಘಪತಿ ಭಟ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯಾವುದೇ ಪ್ರೌಢ ಶಾಲೆಯಲ್ಲೂ ಸಮಸ್ಯೆ ಆಗಿಲ್ಲ. ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿದೆ. ಕಾಲೇಜು ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ತರಗತಿಗಳನ್ನು ಆದಷ್ಟು ಬೇಗ ಆರಂಭಿಸುವಂತೆ ಮನವಿ ಮಾಡಿದ್ದಾರೆ. ಮೊನ್ನೆ ನನಗೂ ವಿದ್ಯಾರ್ಥಿನಿಯರು ಮನವಿ ಮಾಡಿದ್ದರು.
ವಿದ್ಯಾರ್ಥಿನಿಯರ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿ ಕೊಡುತ್ತೇವೆ. ಪಿಯುಸಿ ಆರಂಭ ಆದರೂ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಆಗಲ್ಲ. ಉಡುಪಿ ಪಿಯು ಕಾಲೇಜಿನಲ್ಲಿ ಹಿಂದೆಯೂ ಆರು ಮಕ್ಕಳು ಬಿಟ್ಟು ಉಳಿದವರು ಹಿಜಾಬ್ ತೆಗೆದಿಟ್ಟೇ ತರಗತಿಗೆ ಬರುತ್ತಿದ್ದರು ಎಂದರು.
ಶಾಲಾ ಆವರಣದಲ್ಲಿ ಬಿಗಿ ಭದ್ರತೆ: ಪ್ರೌಢ ಶಾಲೆಗಳು ಆರಂಭಗೊಂಡಿರುವುದರಿಂದ ಜಿಲ್ಲೆಯಾದ್ಯಂತ ಶಾಲಾ-ಕಾಲೇಜು ಆವರಣದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಫೆ. 14 ರಿಂದ 19 ರವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಗಲಾಟೆ ಆರಂಭವಾದ ಕಾಲೇಜು ಸೇರಿದಂತೆ ಜಿಲ್ಲೆಯ ಶಾಲಾ - ಕಾಲೇಜು ಆವರಣದಲ್ಲಿ ಪೊಲೀಸ್ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.
6 ಜನರಿಗೋಸ್ಕರ 900 ಮಂದಿ ಕಷ್ಟ ಪಡೋಕೆ ಆಗಲ್ಲ: ಹಿಜಾಬ್ ವಿವಾದ ಕುರಿತಂತೆ ಉಡುಪಿ ಕಾಲೇಜಿನ ವಿದ್ಯಾರ್ಥಿ ಮಾತನಾಡಿದ್ದು, ಆದಷ್ಟು ಬೇಗ ಕಾಲೇಜು ಆರಂಭಿಸಬೇಕೆಂದು ಪ್ರಾಂಶುಪಾಲರಿಗೆ ಮನವಿ ಮಾಡಿದ್ದೇನೆ. ಆರು ಜನರಿಗೋಸ್ಕರ ನಾವು 900 ಜನ ಕಷ್ಟಪಡಲು ಸಾಧ್ಯವಿಲ್ಲ. ಅವರಿಗಾಗಿ ನಾವು ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಆನ್ಲೈನ್ ತರಗತಿಗಳು ನಮಗೆ ಅರ್ಥವಾಗುವುದಿಲ್ಲ. ನಮಗೆ ತರಗತಿಯಲ್ಲಿ ಕುಳಿತು ಪಾಠ ಕೇಳಬೇಕು. ಈ ಆರು ಜನರಿಗಾಗಿ ನಾವು ನಮ್ಮ ಭವಿಷ್ಯ ಹಾಳು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೊದಲು ಹಿಜಾಬ್ ಧರಿಸುತ್ತಿರಲಿಲ್ಲ: ಇದೇ ಕಾಲೇಜಿನಲ್ಲಿ ಐದು ವರ್ಷದಿಂದ ಕಲಿಯುತ್ತಿದ್ದೇನೆ. ಯಾರು ಕೂಡ ಹಿಜಾಬ್ ಹಾಕಿಕೊಂಡು ಬರುತ್ತಿರಲಿಲ್ಲ. ಇವರು ಡಿಸೆಂಬರ್ನಿಂದ ಗದ್ದಲ ಆರಂಭಿಸಿದ್ದಾರೆ. ಇವರಿಗೆ ಫಸ್ಟ್ ಇಯರ್ನಲ್ಲಿ ಕಾಲೇಜಿಗೆ ಸೇರುವಾಗ ಬುದ್ಧಿ ಇರಲಿಲ್ವಾ, ಈಗ ಬಂದು ಹಿಜಾಬ್ ಬೇಕು ಎಂದು ಕೇಳುತ್ತಿದ್ದಾರೆ. ನಮ್ಮದು ಸಮವಸ್ತ್ರಕ್ಕಾಗಿ ಹೋರಾಟ, ನಾವೇನು ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಬಂದಿಲ್ಲ. ನಮಗೆ ಆದಷ್ಟು ಬೇಗ ಕ್ಲಾಸ್ ಶುರು ಮಾಡಬೇಕು ಅಂತಾ ಆರು ಮಂದಿ ವಿದ್ಯಾರ್ಥಿನಿಯರ ಸಹಪಾಠಿ ಹೇಳಿದ್ದಾರೆ.
ಮಕ್ಕಳ ಬದುಕು ಮುಖ್ಯ- ಪೇಜಾವರ ವಿಶ್ವಪ್ರಸನ್ನ ತೀರ್ಥ : ಮುಂದಿನ ಸಮಾಜ ಸುಶಿಕ್ಷಿತ ಸಮಾಜವಾಗಿ ಇರಬೇಕು. ಸಮಾಜದಲ್ಲಿ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಾಣವಾಗಬೇಕು. ವಿದ್ಯಾರ್ಥಿಗಳು, ಪೋಷಕರು ಇದಕ್ಕೆ ಸಹಕರಿಸಬೇಕು ಎಂದು ಉಡುಪಿ ಮಠದ ವಿಶ್ವ ಪ್ರಸನ್ನ ತೀರ್ಥ ಶ್ರೀ ಹೇಳಿದರು.
ಇಂದಿನ ಮಕ್ಕಳು ಮುಂದಿನ ಪ್ರಜೆಗಳು. ಮಕ್ಕಳ ವಿದ್ಯಾರ್ಜನೆ ಬಹಳ ಮುಖ್ಯ. ಎಲ್ಲರೂ ಶಾಂತಿ ಕಾಪಾಡಬೇಕು. ಪ್ರಕರಣದ ಕೋರ್ಟ್ ವಿಚಾರಣೆ ನಡೆಯುತ್ತಿದೆ. ಏನು ತೀರ್ಪು ಬರುತ್ತದೆ ಕಾದು ನೋಡೋಣ. ತೀರ್ಪಿಗೆ ಅನುಗುಣವಾಗಿ ಮುಂದೆ ನಡೆಯೋಣ ಎಂದು ಪೇಜಾವರ ಶ್ರೀಗಳು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಹಿಜಾಬ್ ಪ್ರಕರಣ: ನಾಳೆ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್