ಉಡುಪಿ: ಮಳೆಯ ಕೊರತೆ ಎದುರಿಸುತ್ತಿರುವ ಜಿಲ್ಲೆಯ ವಿವಿಧೆಡೆ ದೇವಸ್ಥಾನಗಳಲ್ಲಿ ಪ್ರಾರ್ಥನೆ ನಡೆಯುತ್ತಿದ್ದರೆ, ಇಂದು ನಗರದಲ್ಲಿ ನಡೆದ ಕಪ್ಪೆ ಮದುವೆ ಎಲ್ಲರ ಗಮನ ಸೆಳೆಯಿತು.
ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಮತ್ತು ಪಂಚರತ್ನಾ ಸೇವಾ ಟ್ರಸ್ಟ್ ವತಿಯಿಂದ ಮಂಡೂಕ ಕಲ್ಯಾಣೋತ್ಸವ ಆಯೋಜನೆ ಮಾಡಲಾಗಿತ್ತು. ಉಡುಪಿಯ ಕಿದಿಯೂರು ಹೋಟೆಲ್ ವಾಹನ ನಿಲುಗಡೆ ಪ್ರಾಂಗಣದಲ್ಲಿ ಈ ವಿಶಿಷ್ಟ ಮದುವೆ ನಡೆದಿದೆ.
ಸ್ವಸ್ತಿಶ್ರೀ ವಿಕಾರಿ ಸಂವತ್ಸರ ಮಿಥುನ ಮಾಸ ದಿನ ಸಲ್ಲುವ ಜ್ಯೇಷ್ಠ ಶುದ್ಧ ನವಮಿಯ ದಿನಾಂಕ 08-06-2019ನೇ ಶನಿವಾರ 13.05ಕ್ಕೆ ಒದಗುವ ಸಿಂಹ ಲಗ್ನ ಸುಮುಹೂರ್ತದಲ್ಲಿ ಉಡುಪಿ ಕಲ್ಸಂಕದ ಸುಪುತ್ರ ಚಿ.ವರುಣ ಮತ್ತು ಕೊಳಲಗಿರಿ ಕೀಳಿಂಜೆಯ ಸುಪುತ್ರಿ ಚಿ.ಸೌ.ವರ್ಷ ವಿವಾಹ ಇವರ ವಿವಾಹ ಮಹೋತ್ಸವ ನಡೆಯಲಿದ್ದು, ತಾವೆಲ್ಲರೂ ಬಂಧು ಮಿತ್ರರೊಡಗೂಡಿ ಆಗಮಿಸಬೇಕು. ಮಳೆಗಾಗಿ ಪ್ರಾರ್ಥಿಸಬೇಕು! ಇದು ಜಲಕ್ಷಾಮ ನಿವಾರಣೆಗಾಗಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್, ಪಂಚರತ್ನಾ ಸೇವಾ ಟ್ರಸ್ಟ್ ಆಯೋಜಿಸಿರುವ ಮಂಡೂಕ ಕಲ್ಯಾಣೋತ್ಸವ (ಕಪ್ಪೆ ಮದುವೆ)ದ ಆಮಂತ್ರಣ ಪತ್ರಿಕೆಯ ಒಕ್ಕಣೆ ಎಂದು ಈಗಾಗಲೇ ಲಗ್ನ ಪತ್ರಿಕೆ ಹಂಚಲಾಗಿತ್ತು.
ಪ್ರತೀ ವರ್ಷ ಜಲಕ್ಷಾಮ ನಿವಾರಣೆಗಾಗಿ ಕಪ್ಪೆಗಳಿಗೆ ಮದುವೆ ಮಾಡಿ ಸುದ್ದಿಯಾಗುವ ಉಡುಪಿಯ ವಾಟಾಳ್ ನಾಗರಾಜ್ ಖ್ಯಾತಿಯ ನಿತ್ಯಾನಂದ ಒಳಕಾಡು, ಈ ಬಾರಿಯೂ ಕಪ್ಪೆ ಮದುವೆ ಮಾಡಿ ಗಮನ ಸೆಳೆದಿದ್ದಾರೆ. ಕೊಳಲಗಿರಿ ಕೀಳಿಂಜೆಯಿಂದ ಹೆಣ್ಣು ಕಪ್ಪೆ ಮತ್ತು ಉಡುಪಿ ಕಲ್ಸಂಕದಿಂದ ಗಂಡು ಕಪ್ಪೆಯನ್ನು ತರಲಾಗಿತ್ತು. ಹೆಣ್ಣು ಕಪ್ಪೆಗೆ ‘ವರ್ಷ’ ಎಂದೂ ಗಂಡು ಕಪ್ಪೆಗೆ ‘ವರುಣ’ ಎಂದೂ ನಾಮಕರಣ ಮಾಡಲಾಗಿತ್ತು. ‘ಮಳೆಗಾಗಿ ಪ್ರಾರ್ಥನೆಯೇ ಉಡುಗೊರೆ’ ಎಂಬ ಒಕ್ಕಣೆಯ ಮದುವೆ ಆಮಂತ್ರಣ ಪತ್ರಿಕೆಯನ್ನೂ ಹಂಚಿ ಶಾಸ್ತ್ರೋಕ್ತವಾಗಿ ಕಪ್ಪೆ ಮದುವೆ ನಡೆಸಲಾಗಿದೆ.
ಬೆಳಗ್ಗೆ 11ಕ್ಕೆ ಮಾರುತಿ ವೀಥಿಕಾದಿಂದ ಹೊರಟ ಕಪ್ಪೆ ಮದುವೆ ದಿಬ್ಬಣ, ಹಳೆ ಡಯಾನ ವೃತ್ತ, ಕವಿ ಮುದ್ದಣ ಮಾರ್ಗದ ಮೂಲಕ ಕಲ್ಯಾಣ ಮಂಟಪಕ್ಕೆ ಸಾಗಿ ಬರುವಾಗ ಕೃಷ್ಣ ನಗರಿಯ ಜನರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು. ಅಕ್ಷರಶಃ ಮದುವೆ ದಿಬ್ಬಣದಂತೆಯೇ ಇದ್ದ ಕಪ್ಪೆ ಮದುವೆ ದಿಬ್ಬಣದಲ್ಲಿ ವಾದ್ಯ, ಓಲಗದ ಜೊತೆ ನಾಸಿಕ್ ಡೋಲಿನ ಅದ್ದೂರಿ ವಾದ ಎಲ್ಲರ ಗಮನ ಸೆಳೆಯಿತು.
ಮದುವೆ ರೂವಾರಿ ನಿತ್ಯಾನಂದ ಒಳಕಾಡು ಮೂರು ಗಾಲಿಯ ಸೈಕಲ್ನಲ್ಲಿ ಕಪ್ಪೆಗಳನ್ನು ರಾಜ ಮರ್ಯಾದೆಯಿಂದ ಕರೆತಂದ್ರು. ಬಳಿಕ ಹಿಂದೂ ಸಂಪ್ರದಾಯದಂತೆ ಎರಡೂ ಕಪ್ಪೆಗೆ ವಿವಾಹ ಮಾಡಿಕೊಡಲಾಯಿತು. ನೂತನ ಕಪ್ಪೆ ವಧು ವರ್ಷಳಿಗೆ ಕಾಲುಂಗುರ ಮತ್ತು ತಾಳಿ ಕಟ್ಟಿದ ನಂತರ, ಸೋಬಾನೆ ಹಾಡನ್ನು ಹಾಡಿದ ಮುತ್ತೈದೆಯರು ನೂತನ ವಧು-ವರರಿಗೆ ಆರತಿ ಬೆಳಗಿದ್ರು. ವಿವಾಹದ ನಂತರ ವಧು-ವರರನ್ನು ಮಣ್ಣಪಳ್ಳ ಕೆರೆಯಲ್ಲಿ ಹನಿಮೂನ್ಗೆ ಕಳುಹಿಸಲಾಯಿತು.
ಈ ಬಾರಿ ಜೂನ್ ಎರಡನೇ ವಾರದಲ್ಲೂ ಮಳೆ ಬಾರದೇ ಇರುವುದು ಉಡುಪಿಯಲ್ಲಿ ಬರದ ಛಾಯೆ ಆವರಿಸುವಂತೆ ಮಾಡಿದೆ. ಹೀಗಾಗಿ ಉಡುಪಿಯ ಜನ ಈ ಕಪ್ಪೆ ಮದುವೆ ಬೇಕಿತ್ತೇ ಎಂಬ ಪ್ರಶ್ನೆ ಕೇಳುತ್ತಲೇ ಇದನ್ನು ಎಂಜಾಯ್ ಮಾಡಿದ್ದೂ ಅಲ್ಲದೇ ಇನ್ನಾದ್ರೂ ಮಳೆ ಬರಲಿ ಎಂದು ಹಾರೈಸಿದ್ರು.