ಉಡುಪಿ: ವಿದ್ಯಾರ್ಥಿಗಳ ಭವಿಷ್ಯದಲ್ಲಿ ಶಿಕ್ಷಕರು ತಾಯಿ ಸಮಾನವಂತೆ. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು. ಅದರಂತೆ ವಿದ್ಯಾರ್ಥಿಗಳ ಪ್ರತಿ ಹೆಜ್ಜೆಯಲ್ಲೂ ಒಳಿತನ್ನೇ ಬಯಸುವ ಶಿಕ್ಷಕಿಯೊಬ್ಬರು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒಂದು ಪುಟ್ಟ ಕೊಡುಗೆ ಇರ್ಲಿ ಅಂತ ಹೊಸ ಯೋಜನೆ ಹಾಕಿಕೊಂಡಿದ್ದಾರೆ. ಶಿಕ್ಷಕಿಯ ಹೊಸ ಯೋಚನೆ, ಆಲೋಚನೆಗೆ ಶಿಕ್ಷಣ ಸಚಿವರೇ ಭೇಷ್ ಅಂದಿದ್ದಾರೆ.
ಶಿಕ್ಷಣ ಮಾನವ ಜೀವನದ ಪ್ರಮುಖ ಅವಶ್ಯಕತೆಗಳಲ್ಲೊಂದು. ಅದರಲ್ಲೂ ಪ್ರಾಥಮಿಕ ಶಿಕ್ಷಣ, ಅಲ್ಲಿನ ಗುರುಗಳು, ಆಟ ಪಾಠ ಇದೆಲ್ಲ ಒಂದೊಳ್ಳೆ ನೆನಪೇ ಸರಿ.. ಇಂತಹ ಪ್ರಾಥಮಿಕ ಶಿಕ್ಷಣದ ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ಪುಟ್ಟ ನೆರವಾಗಲಿ ಅಂತ, ಶಿವಮೊಗ್ಗ ಜಿಲ್ಲೆಯ ಹೊಸ ನಗರ ಸಮೀಪದ ನೂಲಿಗ್ಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರೇಖಾ ಅವರು ಅತ್ಯುತ್ತಮ ಯೋಜನೆಯೊಂದನ್ನು ರೂಪಿಸಿದ್ದಾರೆ.
ಈ ಯೋಜನೆಯಂತೆ, ತಮ್ಮ ಶಾಲೆಗೆ ಬರುವ ಒಂದನೇ ತರಗತಿ ವಿದ್ಯಾರ್ಥಿಗಳ ಹೆಸರಲ್ಲಿ ಒಂದು ಸಾವಿರ ಹಣವನ್ನು ಬ್ಯಾಂಕ್ ಠೇವಣಿ ಇಡ್ತಾರೆ. 10 ವರ್ಷಗಳಿಗೆ ಠೇವಣಿ ಇಡಲಾಗುತ್ತಿದ್ದು, ವಿದ್ಯಾರ್ಥಿಗಳು 10ನೇ ತರಗತಿ ಓದುವಾಗ ಆ ಹಣ ನೆರವಿಗೆ ಬರಲಿ ಎನ್ನುವುದು ಇದರ ಉದ್ದೇಶ ಅಂತಾರೆ ರೇಖಾ ಟೀಚರ್.
ರೇಖಾ ಅವರಿಗೆ ಶಾಲಾ ದಿನಗಳಲ್ಲಿ ಬಹಳಷ್ಟು ಬಡತನ ಇತ್ತಂತೆ. ಇದೇ ಈ ಯೋಜನೆಗೆ ಪ್ರೇರಣಾದಾಯಿಯಾಗಿದ್ದು, 2014 ರಿಂದ ತಾನು ಶಿಕ್ಷಕಿಯಾಗಿ ಕೆಲಸ ಆರಂಭಿಸಿದಾಗಿನಿಂದ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಹೊಸ ಹೆಜ್ಜೆ ಇಟ್ಟರು.
ಅಲ್ಲದೇ ಮುಂದೆ ವರ್ಗಾವಣೆಯಾಗಿ ಬೇರೆ ಶಾಲೆಗೆ ಹೋದ್ರು ಈ ಯೋಜನೆ ಮುಂದುವರಿಸುತ್ತೇನೆ ಅಂತ ಹೆಮ್ಮೆಯಿಂದ ಹೇಳ್ತಿದ್ದಾರೆ.
ಒಟ್ಟಿನಲ್ಲಿ ಹಣ ಇದ್ದಷ್ಟು ಇರಲಿ, ಬರೋದಿದ್ರೆ ನನಗೇ ಸಿಗಲಿ ಅನ್ನೋ ಮನಸ್ಥಿತಿಯವರ ಮಧ್ಯೆ ಈ ಕಾಲದಲ್ಲಿ ರೇಖಾ ಮ್ಯಾಡಂ ಅವರ ವಿಚಾರ ಮತ್ತು ಯೋಜನೆ ಮಾದರಿಯಾಗಿದೆ. ಎಲ್ಲ ಶಿಕ್ಷಕರು ಈ ಮಾದರಿ ಅನುಸರಿಸಿದರೆ ಸರ್ಕಾರಿ ಶಾಲೆಯ ಮಕ್ಕಳ ಭವಿಷ್ಯ ಉಜ್ವಲಿಸುವುದರಲ್ಲಿ ಸಂಶಯವೇ ಇಲ್ಲ.