ಉಡುಪಿ: ನೂರಾರು ವರ್ಷಗಳ ಹಿಂದೆ ಕರಾವಳಿಯ ಎತ್ತರದ ಬೆಟ್ಟವೊಂದರ ಮೇಲಿದ್ದ ಹಿಂದೂ ಆಸ್ತಿಕ ಕೇಂದ್ರ ಯಾವುದೋ ಕಾರಣದಿಂದ ನಾಶವಾಗಿತ್ತು. ಇದೀಗ ಕರಾವಳಿ ಯುವಕರ ತಂಡದ ಮುಂದಾಳತ್ವದಲ್ಲಿ ಆಸ್ತಿಕರನ್ನು ಸೇರಿಸಿಕೊಂಡು ಇದರ ಪುನರುತ್ಥಾನಕ್ಕೆ ಪಣತೊಡಲಾಗಿದೆ.
ಕೆಲ ದಿನಗಳ ಹಿಂದೆ ಮೂರು ದಿನಗಳ ಅಷ್ಟಮಂಗಲ ಪ್ರಶ್ನೆ ಕೇಳಲಾಗಿದ್ದು, ಇದರಲ್ಲಿ ಜೋತಿಷ್ಯರು ಮತ್ತೆ ದೇವಸ್ಥಾನ ನಿರ್ಮಾಣ ಆಗಲಿದೆ ಎಂದಿದ್ದಾರೆ. ಯುವಕರ ತಂಡ ಕೂಡ ಉತ್ಸುಕರಾಗಿ ದೇಗುಲದ ಪುನರುತ್ಥಾನಕ್ಕೆ ಮುಂದಾಗಿದ್ದಾರೆ.
ಕಾರ್ಕಳ ತಾಲೂಕಿನಲ್ಲಿ ಅತಿ ಎತ್ತರವಾದ ಪರ್ಪಲೆ ಗುಡ್ಡೆ ಇದೆ. ಈ ಗುಡ್ಡದಲ್ಲಿ ಅಷ್ಟಮಂಗಲ ಪ್ರಶ್ನೆ ಚಿಂತನ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದ ಸಂಗತಿಯಾಗಿತ್ತು. ಕಾರ್ಕಳದ ಅತ್ತೂರು ಪರ್ಪಲೆ ಗಿರಿಯ ತುದಿಯಲ್ಲಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಾವಿರಾರು ಜನರು ಸೇರಿದ್ದು, ದೇವರನಾಮ ಸಂಕೀರ್ತನೆಯನ್ನು ಹಾಡಿದ್ದರು.
ಕೇರಳ ಭಾಗದಿಂದ ಬಂದ ದೈವಜ್ಞರ ತಂಡ ಈ ಬೆಟ್ಟದ ಮೇಲಿರುವ ಶಕ್ತಿಗಳು ಯಾವುದು ಎನ್ನುವ ಬಗ್ಗೆ ಚಿಂತನೆ ನಡೆಸಲು ಸುವರ್ಣ ಪೂಜೆ ಮತ್ತು ರಾಶಿ ಚಿಂತನೆ ನಡೆಸಿದ್ದಾರೆ. ಪುಟ್ಟ ಕನ್ನಿಕೆವೋರ್ವಳ ಕೈಯಲ್ಲಿ ರಾಶಿ ಇಡುವ ಮೂಲಕ ಸ್ವರ್ಣ ರೂಡ ರಾಶಿಯನ್ನು ಗುರುತಿಸಲಾಯಿತು. ಬಳಿಕ ಇದರ ಆಧಾರದಲ್ಲೇ ಈ ವಿಚಾರಗಳ ಬಗ್ಗೆ ಚಿಂತನೆ ನಡೆಸಲಾಯಿತು.
ಈ ಸುದ್ದಿಯನ್ನೂ ಓದಿ: 47 ವರ್ಷಗಳ ಕಾಲ ಗ್ರಾಹಕರ ಮೆಚ್ಚುಗೆ ಗಳಿಸಿದ್ದ ಹೋಟೆಲ್ ಇನ್ನು ನೆನಪು ಮಾತ್ರ: ಕಾರಣ?
ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ಪ್ರಕಾರ, ಪರ್ಪಲೆ ಗಿರಿಯಲ್ಲಿ ಶೈವ ಸಾನಿಧ್ಯವಿದ್ದು ಈ ಪ್ರದೇಶದಲ್ಲಿ ಋಷಿಮುನಿಗಳು ತಪಸ್ಸು ಮಾಡುತ್ತಿದ್ದ ಗುಹೆಯೂ ಇದೆ ಎಂದು ಕಂಡುಬಂದಿದೆ. ಇಲ್ಲಿ ದೈವಿ ಸಾನಿಧ್ಯ ದೇವಾಲಯ ರಾಜ ಮಹಾರಾಜರ ಕಾಲದಲ್ಲಿ ನಡೆದ ಸಂಘರ್ಷದಿಂದ ನಾಶಗೊಂಡಿದೆ ಎಂದು ತಿಳಿದುಬಂದಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಆಲಯದ ಕೆಲಸ ಕಾರ್ಯಗಳು ಆರಂಭ ಆಗಲಿದೆ. ಮುಂದಿನ ಒಂದು ವರ್ಷದೊಳಗೆ ಇಲ್ಲಿ ಭವ್ಯ ದೇಗುಲ ನಿರ್ಮಾಣದ ಗುರಿಯನ್ನು ಈ ಭಾಗದ ಗ್ರಾಮಸ್ಥರು ಹೊಂದಿದ್ದಾರೆ.