ಉಡುಪಿ: ಕೇಂದ್ರ ಸರ್ಕಾರ ನಮ್ಮ ವರದಿ ತಿರಸ್ಕರಿಸಿಲ್ಲ. ಹೆಚ್ಚುವರಿ ಮಾಹಿತಿ ಕೇಳಿರಬಹುದು. ಮಾಹಿತಿ ಕೇಳಿದೆ ಅಂದ್ರೆ ವಾಪಸ್ ವರದಿ ಕಳಿಸಿದೆ ಎಂದು ಅರ್ಥವಲ್ಲ. ಕೇಂದ್ರ ಮಾಹಿತಿ ಕೇಳಿದೆ ಅಂದ್ರೆ ಹಣ ಕೊಡಲು ನಿರ್ಧಾರ ಮಾಡಿದ್ದಾರೆ ಎಂದರ್ಥ. ರಾಜ್ಯ ಸಿದ್ದಪಡಿಸಿದ ನಷ್ಟದ ವರದಿ ತಿರಸ್ಕರಿಸಿದ್ದಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.
ನೆರೆಯಿಂದಾಗಿ ಅಪಾರ ಪ್ರಮಾಣದ ಮನೆಗಳಿಗೆ ಹಾನಿಯಾಗಿದೆ. ಅರ್ಧಂಬರ್ಧ ಬಿದ್ದ ಮನೆಗಳಲ್ಲಿ ವಾಸಿಸಲು ಅಸಾಧ್ಯ. ಹಾಗಾಗಿ ಕೆಲ ಅಂಕಿ ಅಂಶಗಳ ಬಗ್ಗೆ ಮಾಹಿತಿ ಕೇಳಿರಬಹುದು. ಮೂರ್ನಾಲ್ಕು ದಿನಗಳಲ್ಲಿ ಗರಿಷ್ಠ ಮೊತ್ತದ ಹಣ ರಾಜ್ಯಕ್ಕೆ ಬರುತ್ತೆ. ಎಲ್ಲಾ ಗೊಂದಲಗಳು ಶೀಘ್ರ ಬಗೆಹರಿಯುತ್ತೆ. ರಾಜ್ಯದಲ್ಲಿ ಹಣಕಾಸಿನ ಕೊರತೆ ಇಲ್ಲ. ಬಹುದೊಡ್ಡ ದುರಂತಗಳು ನಡೆದಾಗ ಹಣ ಎಷ್ಟಿದ್ದರೂ ಬೇಕು ಅನಿಸುತ್ತೆ. ಹಣಕಾಸಿನ ಕೊರತೆ ಇದೆ ಎಂದು ಅದರ ಅರ್ಥವಲ್ಲ.
ಯಡ್ಯೂರಪ್ಪನವರು ಖಜಾನೆಯಲ್ಲಿ ದುಡ್ಡಿಲ್ಲ ಎಂದು ಹೇಳಿಲ್ಲ. ರಸ್ತೆ, ನೀರಾವರಿ ಯೋಜನೆಗಳಿಗೆ ದೊಡ್ಡ ಮೊತ್ತದ ಹಣ ಕೇಳಿರ್ತಾರೆ. ಶಾಸಕರ ಬೇಡಿಕೆ ತುಂಬಾ ಇರುತ್ತೆ. ನೆರೆ ಎದುರಿಸಬೇಕಾದ ಕಾರಣ ಸದ್ಯ ತರಾತುರಿ ಬೇಡ ಎಂದು ಸಿಎಂ ಹೇಳಿರ್ತಾರೆ. ರಾಜ್ಯದಲ್ಲಿ ಹಣದ ಕೊರತೆ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ ಎಂದು ಮೀನುಗಾರಿಕೆ, ಬಂದರು ಹಾಗೂ ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಪಕ್ಷದಲ್ಲಿ ಇರೋದ್ರಿಂದ ಸಿದ್ದರಾಮಯ್ಯ ಸರ್ಕಾರವನ್ನ ಟೀಕಿಸುತ್ತಾರೆ. ಸಿದ್ದರಾಮಯ್ಯನವರ ಅನಿವಾರ್ಯತೆಯನ್ನು ಅರ್ಥ ಮಾಡಿಕೊಳ್ಳುತ್ತೇವೆ. ಅವರ ಅಭಿಪ್ರಾಯವನ್ನು ಗೌರವಿಸ್ತೇವೆ. ವಿಧಾನಸಭೆ ವಿಪಕ್ಷ ನಾಯಕ ಆಯ್ಕೆ ವಿಚಾರ. ಅವರಿಗಿರುವ ಆತಂಕ ಅವರೇ ಸರಿಪಡಿಸಿಕೊಳ್ಳಬೇಕು. ಕಾಂಗ್ರೆಸ್‌ನಲ್ಲಿ ನಾಯಕತ್ವ ಕೊರತೆ ಜಠಿಲವಾಗಿದೆ. ಅವರ ಸಮಸ್ಯೆಗಳನ್ನು ಶೀಘ್ರ ಪರಿಹಾರ ಪಡಿಸಿಕೊಳ್ಳಲಿ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಪ್ರಧಾನಿ ಮೋದಿ ಟೀಕಿಸಿದ ಸೂಲಿಬೆಲೆ ವಿಚಾರವಾಗಿ ಮತಾನಾಡಿದ ಅವರು, ಎಚ್ಚರಿಕೆಗೋಸ್ಕರ ನಮ್ಮವರೇ ನಮ್ಮನ್ನು ಗದರಿಸುತ್ತಾರೆ. ಸೂಲಿಬೆಲೆ ನಮ್ಮ ಮೇಲೆ ಮುನಿಸಿಕೊಂಡಿದ್ದಾರೆ. ಕೋಪಗೊಂಡಿದ್ದಾರೆ ಅಂತಾ ಅಲ್ಲ. ಹಾಗಂತಾ ಅವರು ನಮ್ಮನ್ನು ಬಿಡುತ್ತಾರೆ ಅಂತಾ ಕೂಡಾ ಅಲ್ಲ. ನಮ್ಮಲ್ಲಿ ಸಮಸ್ಯೆಗಳಿದ್ದರೆ ಸರಿಪಡಿಸಿಕೊಂಡು ಹೋಗುತ್ತೇವೆ.
ದೇಶದ್ರೋಹಿ ಎಂಬ ಸದಾನಂದಗೌಡ ಪದಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ನಮ್ಮ ತಪ್ಪಾಗಿದ್ದರೆ ನಾವೇ ಸರಿಮಾಡಿಕೊಳ್ಳುತ್ತೇವೆ. ಸೂಲಿಬೆಲೆ-ಡಿವಿಎಸ್ ಭೇಟಿಯಾದಾಗ ಚೆನ್ನಾಗಿ ಮಾತನಾಡ್ತಾರೆ. ಡಿವಿ ಸದಾನಂದ ಗೌಡ ಸೂಲಿಬೆಲೆಯನ್ನು ಕಂಡು ನಗಾಡುತ್ತಾರೆ. ಅಲ್ಲಿಗೆ ಈ ಪ್ರಕರಣ ಮುಗಿದುಬಿಡುತ್ತದೆ. ಪಾರ್ಟಿಗಾಗಿ ದುಡಿದವರು ಅಭಿವೃದ್ಧಿ ವಿಚಾರವಾಗಿ ಮಾತನಾಡಿದ್ದಾರೆ. ಅವರನ್ನು ಸಮಾಧಾನ ಮಾಡಿದ್ದೇವೆ. ಕಾರ್ಯಕರ್ತರ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡುತ್ತೇವೆ. ನಮ್ಮ ಗುರಿ ಅಭಿವೃದ್ಧಿ ಕಡೆಗಿದೆ ಎಂದು ಕೋಟಾ ಹೇಳಿದ್ದಾರೆ.