ಉಡುಪಿ ಭಾರತದ ಯೋಗ ವಿಶ್ವದ ಗಮನ ಸೆಳೆಯುತ್ತಿದೆ. ಯೋಗದ ಜೊತೆಗೆ ಅನೇಕ ಯೋಗ ಸಾಧಕರು ಕೂಡ ಖ್ಯಾತಿ ಪಡೆಯುತ್ತಿದ್ದಾರೆ. ಯೋಗದಲ್ಲೇ 5 ವಿಶ್ವದಾಖಲೆ ಬರೆದು ಸೈ ಎನಿಸಿಕೊಂಡ ಜಿಲ್ಲೆಯ ತನುಶ್ರೀ ಪಿತ್ರೋಡಿ, ಈ ಬಾರಿ ವಿಶಿಷ್ಟ ರೀತಿಯಲ್ಲಿ ಯೋಗ ದಿನ ಆಚರಿಸಿದ್ದಾರೆ. ಈ ಯೋಗ ಭಂಗಿ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗ್ತಿದೆ.
ಸಾಮೂಹಿಕ ಯೋಗ ದಿನಾಚರಣೆಗೆ ಅವಕಾಶ ಇಲ್ಲದ ಕಾರಣ ತನ್ನ ಮನೆಯಲ್ಲೇ ಕೆಲವೊಂದು ಅಪರೂಪದ ಯೋಗ ಕಸರತ್ತುಗಳನ್ನು ಪ್ರದರ್ಶಿಸಿದ್ದಾಳೆ ಈ ಬಾಲಕಿ. ನಿರಾಲಂಬ ಪೂರ್ಣ ಚಕ್ರಾಸನ, ಧನುರಾಸನ ವಿಭಾಗದಲ್ಲಿ ತನುಶ್ರೀ ಸತತ ದಾಖಲೆಗಳನ್ನು ಮಾಡಿದ್ದು, ಈ ಆಸನಗಳು ಸೇರಿದಂತೆ ಹಲವು ಅಪರೂಪದ ಆಸನಗಳನ್ನು ಪ್ರದರ್ಶಿಸಿದ್ದಾಳೆ. 13ರ ವಯಸ್ಸಿನ ಈ ಬಾಲಕಿಯ ಸಾಧನೆಗೆ ಯೋಗ ಜಗತ್ತೇ ಬೆರಗಾಗಿದೆ.
ಯೋಗಗುರು ಬಾಬಾ ರಾಮ್ ದೇವ್ ಕೂಡಾ ಈಕೆಯ ಕಸರತ್ತು ನೋಡಿ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಸಾಮೂಹಿಕವಾಗಿ ಯೋಗ ಮಾಡುವ ಖುಷಿಯೇ ಬೇರೆ. ಆದರೆ, ಈ ಬಾರಿ ಕೊರೊನಾ ಹಿನ್ನೆಲೆ ಎಲ್ಲರೂ ಮನೆಯಲ್ಲೇ ಯೋಗ ಮಾಡುವಂತಾಯಿತು. ಯೋಗ ದಿನದಂದು ಆರಂಭವಾದ ಈ ಮನೆ ಅಭ್ಯಾಸ ನಿತ್ಯವೂ ಮುಂದುವರಿಯಲಿ ಎಂದು ತನುಶ್ರೀ ಹೇಳಿದ್ದಾಳೆ.