ಉಡುಪಿ: ಕಮಲಶಿಲೆ ಕರಾವಳಿಯ ಪವಿತ್ರ ಪುಣ್ಯ ಕ್ಷೇತ್ರಗಳಲ್ಲಿ ಒಂದು. ಶ್ರೀ ಕ್ಷೇತ್ರದಲ್ಲಿ ಈಗ ನವರಾತ್ರಿ ಸಂಭ್ರಮ. ಉದ್ಭವ ಸ್ವರೂಪಿ ಪವಿತ್ರ ಬ್ರಾಹ್ಮಿ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ತಮಿಳುನಾಡು ಮೂಲದ ಭಕ್ತರೊಬ್ಬರು ತಮ್ಮ ವಿಶೇಷ ಸೇವೆ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸಿರಿವಂತನ ಸಿಂಪ್ಲಿಸಿಟಿ ಕುರಿತಾದ ಸ್ಟೋರಿ ಇಲ್ಲಿದೆ.
ಹೀಗೆ ದೇಗುಲದ ಅನ್ನ ಛತ್ರದಲ್ಲಿ ಅನ್ನ ಪ್ರಸಾದಕ್ಕೆ ಬಾಳೆ ಎಲೆ ನೀಡುತ್ತಾ, ಲೋಟಕ್ಕೆ ನೀರು ತುಂಬಿಸುತ್ತಾ, ಊಟ ಮಾಡಿದ ಬಳಿಕ ಬಾಳೆ ಎಲೆ ತೆಗೆದು ಸ್ವಚ್ಛ ಮಾಡುತ್ತಾ ಇರುವ ವ್ಯಕ್ತಿಯನ್ನು ನೋಡಿದ್ರೆ ಯಾರೋ ದೇಗುಲದ ಅನ್ನ ಛತ್ರದ ಸಿಬ್ಬಂದಿ ಅಂತಾ ನೀವು ಅಂದು ಕೊಳ್ಳಬಹುದು. ಆದರೆ ಇವರು ಇಲ್ಲಿನ ಸಿಬ್ಬಂದಿ ಅಲ್ಲ, ಬದಲಾಗಿ ತಮಿಳುನಾಡು ಮೂಲದ ಪ್ರತಿಷ್ಠಿತ ಸಿಎ (ಆಡಿಟರ್) ಹೆಸರು ರಾಜಶೇಖರ್. ದೇಗುಲಕ್ಕೆ ಅನ್ನಛತ್ರದಲ್ಲಿ ಸೇವೆ ಸಲ್ಲಿಸಲು ದುಬಾರಿ ಐಷಾರಾಮಿ ಕಾರಿನಲ್ಲಿ ಇಲ್ಲಿಗೆ ಪ್ರತಿ ವರ್ಷವೂ ಬರುತ್ತಾರೆ.
ಸುಮಾರು ನಾಲ್ಕು ವರ್ಷಗಳ ಹಿಂದೆ ತಮಿಳುನಾಡು ಮೂಲದ ರಾಜಶೇಖರ್ ಸ್ನೇಹಿತನ ಜತೆ ದೇವಸ್ಥಾನಕ್ಕೆ ಬಂದಿದ್ದರು. ಇಲ್ಲಿ ಬಂದ ಬಳಿಕ ತಮ್ಮ ಬದುಕಿನಲ್ಲಿ ಮಹತ್ವದ ಬದಲಾವಣೆ ಆದ ಕಾರಣ, ದೇಗುಲದಲ್ಲಿ ತಾವು ಏನಾದರೂ ಸೇವೆ ಸಲ್ಲಿಸಬೇಕು ಎಂದು ನಿರ್ಧರಿಸಿದ್ದರು. ಹೀಗೆ ರಾಜಶೇಖರ್ ಅವರು ಪ್ರತಿ ವರ್ಷ ಈ ಪುಣ್ಯಕ್ಷೇತ್ರಕ್ಕೆ ಬಂದು ತಮ್ಮ ಕೈಲಾದ ಸೇವೆ ಸಲ್ಲಿಸಿ ತಮಿಳುನಾಡಿಗೆ ವಾಪಸ್ಸಾಗುತ್ತಾರೆ. ಈ ವರ್ಷವೂ ಕಮಲಶಿಲೆ ಕ್ಷೇತ್ರಕ್ಕೆ ಬಂದು ತಾಯಿ ದುರ್ಗಾಪರಮೇಶ್ವರಿಯ ದರ್ಶನ ಮಾಡಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಬಾರದಿದ್ದರೂ ಅರ್ಥ ಮಾಡಿಕೊಳ್ಳುತ್ತಾ ಎಲ್ಲ ರೀತಿಯ ಕೆಲಸವನ್ನೂ ಶಿಸ್ತು ಬದ್ಧವಾಗಿ ಮಾಡಿದ್ದಾರೆ. ಇದು ದೇವರ ಸೇವೆ ಇದರಲ್ಲಿ ನನಗೆ ಖುಷಿ ಇದೆ, ಮುಂದೆಯೂ ಸೇವೆ ಮಾಡುವ ಭಾಗ್ಯ ಸಿಗಲಿ ಅಂತ ಖುಷಿಯಿಂದ ಹೇಳ್ತಾರೆ ರಾಜಶೇಖರ್.
ಈ ವಿಶೇಷ ಭಕ್ತನನ್ನು ಕಂಡ ಊರವರೂ ಖುಷಿಗೊಂಡಿದ್ದಾರೆ. ಜೀವನದಲ್ಲಿ ಹಣವೊಂದೇ ಅಲ್ಲ, ಗುಣವೂ ಮುಖ್ಯ, ದೇವರ ಸೇವೆಯಲ್ಲಿ ಸಿಗುವ ನೆಮ್ಮದಿ ಯಾವುದರಲ್ಲೂ ಇಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.