ಉಡುಪಿ: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವುದಕ್ಕೆ ಮನನೊಂದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ. ಇಲ್ಲಿನ ಹೆರಿಕುದ್ರು ಸೇತುವೆಯಿಂದ ಹೊಳೆಗೆ ಹಾರಿದ್ದ ವಿದ್ಯಾರ್ಥಿ ಸಾಯಿಷ್ ಶೆಟ್ಟಿ (17) ಮೃತದೇಹ ಶುಕ್ರವಾರ ಬೆಳಗ್ಗೆ ನಾವುಂದ ಪೆಟ್ರೋಲ್ ಬಂಕ್ ಹಿಂಭಾಗ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
ವಿದ್ಯಾರ್ಥಿಯು ವಡೇರಹೋಬಳಿ ಜೆಎಲ್ಬಿ ರಸ್ತೆ ನಿವಾಸಿ ರಘುವೀರ್ ಶೆಟ್ಟಿ ಎಂಬುವರ ಮಗನಾಗಿದ್ದ. ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವುದಕ್ಕೆ ಮನನೊಂದು ಗುರುವಾರ ಮಧ್ಯಾಹ್ನ ಸೇತುವೆ ಮೇಲೆ ಸೈಕಲ್ ಇರಿಸಿ ಹೊಳೆಗೆ ಹಾರಿದ್ದ ಎಂದು ತಿಳಿದುಬಂದಿದೆ.
ಗುರುವಾರ ಸಂಜೆಯ ತನಕವೂ ಮುಳುಗು ತಜ್ಞರು ಹಾಗೂ ಸ್ಥಳೀಯರು ವಿದ್ಯಾರ್ಥಿಯ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದರೂ ನೀರಿನ ಹರಿವು ಹೆಚ್ಚಿದ್ದರಿಂದ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಶುಕ್ರವಾರ ಸ್ಥಳೀಯ ಯುವಕರು ಸಮುದ್ರ ತೀರದಲ್ಲಿದ್ದ ಮೃತದೇಹ ಪತ್ತೆಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಮೊಬೈಲ್ ಹೆಚ್ಚು ಬಳಸಬೇಡ ಎಂದು ಅಪ್ಪ ಹೇಳಿದ್ದೇ ತಪ್ಪಾಯ್ತಾ?... ಶವವಾಗಿ ಮಗ ಪತ್ತೆ