ಉಡುಪಿ: ಕೋವಿಡ್ ನಿಯಂತ್ರಣಕ್ಕೆ ಉಡುಪಿ ಜಿಲ್ಲಾಡಳಿತ ಮತ್ತೊಂದು ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ. 50ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳಿರುವ ಗ್ರಾಮಗಳು ನಾಳೆಯಿಂದ ಸಂಪೂರ್ಣ ಲಾಕ್ ಆಗಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಆದೇಶ ಹೊರಡಿಸಿದ್ದಾರೆ.
ಜೂನ್ 7 ರವರೆಗೆ ಈ ಗ್ರಾಮಗಳಲ್ಲಿ ಸಂಪೂರ್ಣ ಲಾಕ್ಡೌನ್ ಅನ್ವಯವಾಗಲಿದ್ದು, ಜಿಲ್ಲೆಯ ಒಟ್ಟು 165 ಗ್ರಾಮಗಳ ಪೈಕಿ 33 ಗ್ರಾಮಗಳು ಕಂಪ್ಲೀಟ್ ಲಾಕ್ಡೌನ್ ಆಗಲಿವೆ. ಮೆಡಿಕಲ್ ಶಾಪ್, ಕೃಷಿ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಲಿದ್ದು, ಅನುಮತಿ ಪಡೆದ ಮದುವೆಗೆ ಮಾತ್ರ ಅವಕಾಶ ಇದೆ. ಗ್ರಾಮದ ಗಡಿಯಲ್ಲಿ ಬ್ಯಾರಿಕೇಡ್ ಅಳವಡಿಸಿ ಪೊಲೀಸರನ್ನು ನಿಯೋಜಿಸಲಾಗಿದೆ.
ಶಿರೂರು, ಜಡ್ಕಲ್, ಕಂಬದಕೋಣೆ, ನಾಡ, ಕಾವ್ರಾಡಿ, ಹೊಂಬಾಡಿ ಮಂಡಾಡಿ, ಕೋಟೇಶ್ವರ, ಹಾಲಾಡಿ, ಇಡೂರು, ಕುಂಜ್ಞಾಡಿ, ಆಜ್ರಿ, ಆಲೂರು, ಕಳತ್ತೂರು, ಬಡಗಬೆಟ್ಟು, ಅಲೆವೂರು, ಪೆರ್ಡೂರ, ತೆಂಕನಿಡಿಯೂರು, ಬೊಮ್ಮರಬೆಟ್ಟು, ಬೆಳಪು, ಬೆಳ್ಳೆ, ಪಡುಬಿದ್ರಿ, ಶಿರ್ವ, ಮಾಳ, ಈದು, ಕುಕ್ಕುಂದೂರು, ಕಡ್ತಲ, ಮರ್ಣೆ, ಪಳ್ಳಿ, ನಿಟ್ಟೆ, ಮಿಯಾರು, ಬೆಳ್ಮಣ್, ಬೆಳ್ವೆ, ಮುದ್ರಾಡಿ, ವರಂಗ ಗ್ರಾಮಗಳಲ್ಲಿ 50ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಕಂಡು ಬಂದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಜೂನ್ 7ರೊಳಗೆ ಪಾಸಿಟಿವಿಟಿ ರೇಟ್ ಶೇ 10ರೊಳಗೆ ತರಬೇಕಿದೆ: ಉಡುಪಿ ಡಿಸಿ
ಈಗಾಗಲೇ ಜಿಲ್ಲೆಯಲ್ಲಿ ಶೇ. 19 ರಷ್ಟು ಪಾಸಿಟಿವಿಟಿ ರೇಟ್ ಇದ್ದು, ಪಾಸಿಟಿವಿಟಿ ರೇಟ್ನ್ನು ಶೇ.19 ರಿಂದ ಶೇ.10ಕ್ಕೆ ಇಳಿಸಲು ಈ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.