ಉಡುಪಿ: ಪ್ರಧಾನಿ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಪಾಕ್ ಪ್ರಧಾನಿಯ ಗುಣಗಾನ ಮಾಡಿದ ಕಾಂಗ್ರೆಸ್ ಶಾಸಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ, ಪಾಕ್ ಪ್ರಧಾನಿಯನ್ನು ಹಾಡಿ ಹೊಗಳಿದ್ದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ವ್ಯಕ್ತವಾಗಿದೆ.
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ಪರ ಶಾಸಕ ರಾಜೇಗೌಡ ಪ್ರಚಾರ ಮಾಡುವ ವೇಳೆಯಲ್ಲಿ ಪಾಕ್ ಪ್ರಧಾನಿಯನ್ನು ಹೊಗಳಿದ್ದಾರೆ ಎನ್ನಲಾಗಿದೆ. ಎನ್.ಆರ್.ಪುರ ತಾಲೂಕಿನ ಮೆಣಸೂರಿನಲ್ಲಿ ಮತಯಾಚನೆ ಮಾಡುವ ವೇಳೆ ಪ್ರಧಾನಿ ಮೋಡಿ ವಿರುದ್ಧ ವಾಗ್ದಾಳಿ ನಡೆಸಿದರು. ಅದೇ ಭರದಲ್ಲಿ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಜ್ಜನ, ಸೌಮ್ಯ ವ್ಯಕ್ತಿತ್ವ ಹೊಂದಿರುವವರು. ಅದಕ್ಕಾಗಿ ವಿಂಗ್ ಕಮ್ಯಾಂಡರ್ ಅಭಿನಂದರ್ರನ್ನು ಭಾರತಕ್ಕೆ ವಾಪಸ್ ಕಳಿಸಿದರು ಎಂದು ಹೇಳಿದ್ದಾರೆ.
ಗೋವಾದಿಂದ 2 ಬಾಟಲಿ ವಿಸ್ಕಿ ತಂದರೆ ದಂಡ ಹಾಕುತ್ತಾರೆ. ಆದರೆ 350 ಕೆ.ಜಿ. ಆರ್.ಡಿ.ಎಕ್ಸ್ ಜೀಪಿನಲ್ಲಿ ತಂದು ಸೈನಿಕರ ಬಸ್ಸಿಗೆ ಗುದ್ದಿಸಿ ಹತ್ಯೆ ಮಾಡುವಾಗ ಮೋದಿಯವರ 56 ಇಂಚಿನ ಎದೆ ಎಲ್ಲಿ ಹೋಗಿತ್ತು? ಮೋದಿರನ್ನು ನೋಡಿ ಪಾಕಿಸ್ತಾನ ಹೆದರಲ್ಲ. ನಮ್ಮ ದೇಶದ ಸೈನಿಕರು ಹಾಗೂ ಜನರ ಭಾವನೆಗಳಿಗೆ ಬೇರೆ ದೇಶಗಳು ಬೆಲೆ ಕೊಡುತ್ತಿವೆ ಎಂದು ಮೋದಿ ವಿರುದ್ಧ ಮಾತನಾಡಿದ್ದಾರೆ.
ನೀವು ಅಧಿಕಾರದಲ್ಲಿದ್ದಾಗಲೆ ದೇಶದಲ್ಲಿ ಹಲವು ದಾಳಿಗಳಾದವು. ಆಗ ಎಲ್ಲಿ ಹೋಗಿತ್ತು ನಿಮ್ಮ ಪೌರುಷ, 56 ಇಂಚಿನ ಎದೆಗಾರಿಕೆ? ನಮ್ಮ ದೇಶದ ಭದ್ರತೆ ಹಾಗೂ ಸೈನಿಕರ ಬಗ್ಗೆ ಮಾತನಾಡಲು ನಿಮಗೆ ಅಧಿಕಾರವಿಲ್ಲ. ನಿಮ್ಮ ಸರ್ಕಾರ ಮಸೀದಿ ಹಾಗೂ ಚರ್ಚ್ ಕಟ್ಟಲಿಲ್ಲ. ನಮ್ಮ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳದ ಸರ್ಕಾರ ಮಸೀದಿ ಹಾಗೂ ಕ್ರೈಸ್ತ ದೇವಾಲಯಗಳನ್ನ ನಿರ್ಮಾಣ ಮಾಡಿಕೊಟ್ಟಿದೆ ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ಶಾಸಕನ ಹೇಳಿಕೆಗ ಪ್ರತಿಕ್ರಿಯಿಸಿರುವ ಸಂಸದೆ ಶೋಭಾ ಕರಂದ್ಲಾಜೆ, ಮೋದಿ ಅವರು 5 ವರ್ಷ ಒಂದು ಕಪ್ಪು ಚುಕ್ಕಿ ಇಲ್ಲದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಇಷ್ಟೆಲ್ಲಾ ಒಳ್ಳೆಯ ಕೆಲಸ ಮಾಡಿದ ಮೋದಿರನ್ನು ಕೆಟ್ಟವರು ಅಂತಾರೆ. ಆದರೆ ಪಾಕಿಸ್ತಾನದ ಇಮ್ರಾನ್ ಖಾನ್ ಸಜ್ಜನ ವ್ಯಕ್ತಿ, ಅದಕ್ಕಾಗಿ ಅಭಿನಂದನ್ರನ್ನು ವಾಪಸ್ ಕಳಿಸಿದ್ದಾರೆ ಎಂದೂ ರಾಜೇಗೌಡರು ಹೇಳಿದ್ದಾರೆ. ವಿದ್ಯಾವಂತರು, ಮಠ ಮಾನ್ಯಗಳು, ಸಂಘ ಸಂಸ್ಧೆಗಳು, ಸಜ್ಜನ ವ್ಯಕ್ತಿಗಳು ಇರುವ ಇಂತಹ ಕ್ಷೇತ್ರದಲ್ಲಿ ಶಾಸಕ ದೇಶಕ್ಕೆ ಅಪಮಾನ ಮಾಡಿದ್ದಾರೆ ಎಂದು ಜರಿದರು.
ಇಮ್ರಾನ್ ಖಾನ್ ಒಳ್ಳೆಯವರು ಎಂದು ಹೇಳುವ ಮೂಲಕ ಏನು ಸಂದೇಶ ಕೊಡಲು ಹೋರಟಿದ್ದೀರಿ? ಯಾರ ಮಾತನ್ನು ನಿಮ್ಮ ಬಾಯಿ ಮೂಲಕ ಹೇಳುತ್ತಿದ್ದೀರಿ? ರಾಜಕೀಯ ಲಾಭಕ್ಕಾಗಿ ಇಂತಹ ನೀಚ ಮಟ್ಟಕ್ಕೆ ಶಾಸಕರು ಇಳಿದಿದ್ದಾರೆ. ಈ ಮೂಲಕ ಕಾಂಗ್ರೆಸ್ನವರ ಹೃದಯದಲ್ಲಿರುವ ಮಾತನ್ನೇ ಅವರು ಹೇಳಿದ್ದಾರೆ.ಇಂತವರನ್ನು ನಾವು ಸಹಿಸಿಕೊಳ್ಳಬೇಕಾ? ದೇಶಕ್ಕಾಗಿ ಮೋದಿ ಬೇಕಾಗಿದ್ದಾರೆ. ಸೈನಿಕರ ಬಲಕ್ಕಾಗಿ ಮೋದಿ ಬೇಕಾಗಿದ್ದಾರೆ. ಅಭಿವೃದ್ದಿಗಾಗಿ ಮೋದಿ ಬೇಕಾಗಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.