ಉಡುಪಿ: ಶ್ರೀ ಕೃಷ್ಣನ ಜನ್ಮಾಷ್ಟಮಿಯ ಅಂಗವಾಗಿ ನಿನ್ನೆ ದಿನವಿಡೀ ಉಪವಾಸದಲ್ಲಿದ್ದ ಪರ್ಯಾಯ ಶ್ರೀ ವಿದ್ಯಾದೀಶತೀರ್ಥ ಸ್ವಾಮೀಜಿ, ರಾತ್ರಿ 12:12ಕ್ಕೆ ಕೃಷ್ಣ ಗುಡಿಯ ಪಕ್ಕದಲ್ಲಿದ್ದ ತುಳಸಿಗೆ ಶಂಖದ ಮೂಲಕ ನೀರು ಹಾಗೂ ಹಾಲು ಸಮರ್ಪಿಸಿ ಚಂದ್ರನಿಗೆ ಅರ್ಘ್ಯ ಪ್ರಧಾನ ಮಾಡಿದರು.
ಚಂದ್ರನಿಗೆ ಅರ್ಘ್ಯ ಸಮರ್ಪಿಸಿದ ಬಳಿಕ ಕೃಷ್ಣನ ಮೂರ್ತಿಗೆ ಹಾಲು, ನೀರಿನ ಮೂಲಕ ಅರ್ಘ್ಯ ಸಮರ್ಪಿಸಿ ಉಂಡೆ, ಚಕ್ಕುಲಿ ನೈವೇದ್ಯ ಮಾಡಿ ಮಹಾಮಂಗಳಾರತಿ ಮಾಡುವ ಮೂಲಕ ಕೃಷ್ಣನಿಗೆ ಜನ್ಮಾಷ್ಟಮಿಯನ್ನ ಆಚರಿಸಿದರು. ಪಲಿಮಾರು ಮಠದ ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಯತಿ ಈಶಪ್ರಿಯ ಸ್ವಾಮೀಜಿ ಕೂಡ ಚಂದ್ರನಿಗೆ ಶಂಖದಿಂದ ಹಾಲು ಹಾಗೂ ನೀರಿನಿಂದ ಅರ್ಘ್ಯ ಸಮರ್ಪಿಸಿದರು.
ಇದೇ ವೇಳೆ ಸ್ವಾಮಿಗಳ ಅರ್ಘ್ಯ ಸಮರ್ಪಣೆ ಬಳಿಕ ದಿನವಿಡೀ ಉಪವಾಸದಲ್ಲಿದ್ದ ಭಕ್ತ ಸಮೂಹ ಕೂಡ ಕೃಷ್ಣನ ಗುಡಿಯ ಎದುರು ಸಾಮೂಹಿಕವಾಗಿ ನೀರಿನಿಂದ ಅರ್ಘ್ಯ ಸಮರ್ಪಿಸಿ ಪುನೀತರಾದರು.