ಉಡುಪಿ: ವೃಂದಾವಸ್ಥರಾದ ಉಡುಪಿ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಎರಡನೇ ವರ್ಷದ ಪುಣ್ಯಸ್ಮರಣೆ ರಾಜ್ಯದ ಹಲವೆಡೆ ನಡೆದಿದೆ.
ಕೋವಿಡ್-19 ಆತಂಕ ಮತ್ತು ಭಾನುವಾರವೂ ಲಾಕ್ಡೌನ್ ಇರುವುದರಿಂದ ತಮ್ಮ ಮನೆ ಮಠಗಳಲ್ಲೇ ಭಕ್ತರು, ಪೂರ್ವಾಶ್ರಮದವರು ಪುಣ್ಯಸ್ಮರಣೆ ಮಾಡಿದರು.
ಕೇಮಾರು ಶ್ರೀ ಸಾಂದಿಪನಿ ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ತಮ್ಮ ಮಠದಲ್ಲಿ ಶ್ರೀವರದನಾರಾಯಣ, ಮೂಕಾಂಬಿಕಾ, ಹಾಗೂ ಶಾಲಗ್ರಾಮ ಸನ್ನಿಧಿಗೆ ವಿಶೇಷ ಅಭಿಷೇಕ ಹಾಗೂ ಮಹಾಪೂಜೆ ಸಲ್ಲಿಸಿದರು. ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿನಮನ ಸಲ್ಲಿಸಿದರು.
ಬೈಂದೂರು ತಾಲೂಕು ಕಿರಿ ಮಂಜೇಶ್ವರದ ಹೊಸಹಿತ್ಲು ಸಮುದ್ರ ಕಿನಾರೆಯಲ್ಲಿ ಶ್ರೀರಾಮ ಭಜನಾ ಮಂದಿರದ ವತಿಯಿಂದ ಸ್ಮರಣಾ ಕಾರ್ಯಕ್ರಮ ನಡೆಯಿತು. ಶಿರೂರು ಶ್ರೀಪಾದರ ನೆನಪಿನಲ್ಲಿ ಗಿಡ ನೆಡಲಾಯಿತು.
ಉಡುಪಿಯ ಪರಿಯಾಳ ಸಮುದಾಯ, ಶ್ರೀಗಳ ಭಕ್ತ ಬೆಂಗಳೂರಿನ ಶ್ರೀಕೃಷ್ಣ ಟೂರ್ಸ್ ಆಂಡ್ ಟ್ರಾವೆಲ್ಸ್ನ ಶ್ರೀನವೀನ್ ಮನೆಯಲ್ಲಿ, ಶ್ರೀ ಲಕ್ಷ್ಮೀವರ ತೀರ್ಥರ ಪೂರ್ವಾಶ್ರಮದ ಸಹೋದರರು ಮತ್ತು ಬಂಧುಗಳು ತಮ್ಮ ಮನೆಯ ವಠಾರದಲ್ಲಿ ಶ್ರೀಪಾದರ ಭಾವ ಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ನಡೆಸಿ ಪುಣ್ಯಸ್ಮರಣೆ ಮಾಡಿದರು.