ಉಡುಪಿ: ಕಳೆದ ವಾರ ಜಿಲ್ಲೆಯ ಕೊಲ್ಲೂರು ಬಳಿಯಿರುವ ಅರಶಿನಗುಂಡಿ ಜಲಪಾತದಲ್ಲಿ ಬಂಡೆಯ ಮೇಲೆ ನಿಂತು ಜಲಪಾತ ವೀಕ್ಷಿಸುತ್ತಿದ್ದ ಯುವಕನೊಬ್ಬ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರು ಪಾಲಾಗಿರುವ ಘಟನೆ ನಡೆದಿತ್ತು. ಭದ್ರಾವತಿ ಮೂಲದ ಶರತ್ ಕುಮಾರ್ (23) ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿತ್ತು.
ಯುವಕನ ಶವ ಪತ್ತೆ ಹಚ್ಚಲು ಕೊಲ್ಲೂರು ಪೊಲೀಸರು, ಅಗ್ನಿಶಾಮಕ ದಳ, ಸ್ಥಳೀಯರು ಮತ್ತು ಮುಳುಗು ತಜ್ಞರ ತಂಡಗಳು ಶೋಧ ಕಾರ್ಯಾಚರಣೆ ನಡೆಸಿದ್ದರು. ಅದರಂತೆ ಇಂದು ಶರತ್ ಮೃತದೇಹ ಅರಶಿನ ಗುಂಡಿ ಜಲಪಾತದಿಂದ 200 ಮೀಟರ್ ಕೆಳಗಡೆ ದೊರೆತಿದೆ. ಬಂಡೆ ಕಲ್ಲಿನೊಳಗಡೆ ಸಿಲುಕಿ ಹಾಕಿಕೊಂಡ ಮೃತದೇಹವನ್ನು ಹೊರತೆಗೆಯಲಾಗಿದೆ.
ಘಟನೆ ಹಿನ್ನೆಲೆ: ಜುಲೈ 23 ರಂದು ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದ ಶರತ್, ಜಲಪಾತ ವೀಕ್ಷಣೆಗೆಂದು ತೆರಳಿದ್ದಾಗ ದುರ್ಘಟನೆ ಸಂಭವಿಸಿತ್ತು. ಬಂಡೆಯ ಮೇಲೆ ನಿಂತು ಧುಮ್ಮಿಕ್ಕುವ ಜಲಪಾತವನ್ನು ಇವರು ವೀಕ್ಷಿಸುತ್ತಿದ್ದರು. ಇದನ್ನು ಸ್ನೇಹಿತ ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿದ್ದರು. ಆದರೆ ಶರತ್ ಕುಮಾರ್ ಈ ವೇಳೆ ಆಕಸ್ಮಿಕವಾಗಿ ಕಾಲುಜಾರಿ ನೀರಿನಲ್ಲಿ ಬಿದ್ದು ಕೊಚ್ಚಿ ಹೋಗಿದ್ದರು. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದನ್ನೂ ಓದಿ: Watch: ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ನೀರಿನಲ್ಲಿ ಕೊಚ್ಚಿಹೋದ ಯುವಕ.. ದೃಶ್ಯ ಮೊಬೈಲ್ನಲ್ಲಿ ಸೆರೆ
ಮುಂಗಾರು ಮಳೆ ಜೋರಾಗಿದ್ದು, ಜಲಪಾತಗಳು ರಭಸವಾಗಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯ ಅರಶಿನಗುಂಡಿ ಫಾಲ್ಸ್ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಇಂದಿನಿಂದ ಕೊಡಚಾದ್ರಿ ಬೆಟ್ಟಕ್ಕೂ ಪ್ರವೇಶ ನಿಷೇಧವಿದೆ. ಫಾಲ್ಸ್, ಚಾರಣಕ್ಕೂ ಕಡಿವಾಣ ಹಾಕಲಾಗಿದೆ.
ರೀಲ್ಸ್ ಮಾಡಲು ಹೋಗಿ ಆಪತ್ತು: ಇತ್ತೀಚೆಗೆ ಇನ್ಸ್ಟಾಗ್ರಾಮ್ ರೀಲ್ಸ್ ಮಾಡಲೆಂದು ಹೋಗಿ ಅನೇಕ ಯುವಕರು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ನಿನ್ನೆಯಷ್ಟೇ ರೀಲ್ಸ್ ಮಾಡಲು ಹೋಗಿ ಯುವಕನೊಬ್ಬ ಗಂಭೀರ ಗಾಯಗೊಂಡ ಘಟನೆ ಹುಬ್ಬಳ್ಳಿ ಜಿಲ್ಲೆಯ ಅಣ್ಣಿಗೇರಿ ರಸ್ತೆಯಲ್ಲಿ ನಡೆದಿತ್ತು. ಗದಗ ಜಿಲ್ಲೆಯ ನರಗುಂದ ಪಟ್ಟಣದ ನಿವಾಸಿ ಸಮೀರ್ ಎಂಬುವವರು, ಬೈಕ್ ಮೇಲೆ ನಿಂತು ತೆರಳುತ್ತಿದ್ದಾಗ ಅವಘಡ ಸಂಭವಿಸಿತ್ತು.
ಇದನ್ನೂ ಓದಿ: Kodachadri Hills: ಇಂದಿನಿಂದ ಕೊಡಚಾದ್ರಿ ಬೆಟ್ಟಕ್ಕೆ ಪ್ರವೇಶ ನಿಷೇಧ: ಫಾಲ್ಸ್, ಚಾರಣಕ್ಕೂ ಕಡಿವಾಣ
ರೀಲ್ಸ್ ಮಾಡಲೆಂದು ಬೈಕ್ ಮೇಲೆ ನಿಂತು ದೂರದವರೆಗೆ ತೆರಳಿದ್ದ ಸಮೀರ್ ಬಳಿಕ ಆಯತಪ್ಪಿ ಕೆಳಗೆ ಬಿದ್ದಿದ್ದ. ಗಂಭೀರವಾಗಿ ಗಾಯಗೊಂಡ ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಯುವಕನಿಗೆ ಚಿಕಿತ್ಸೆ ನಡೆಯುತ್ತಿದೆ. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಹೊಗೆನಕಲ್ ಫಾಲ್ಸ್ನಲ್ಲಿ ಮುಳುಗಿ ತಮಿಳುನಾಡಿನ ಇಬ್ಬರು ಯುವಕರು ಸಾವು