ಉಡುಪಿ : ದೇಶ ವಿದೇಶದಲ್ಲಿ ಬಹಳಷ್ಟು ಬೇಡಿಕೆ ಇರುವ ಶಂಕರಪುರ ಮಲ್ಲಿಗೆ ಮಂಕಾಗಿದೆ. ಚಿನ್ನದ ಹೂವು ಎಂದು ಫೇಮಸ್ ಆಗಿರುವ ಮಲ್ಲಿಗೆ ಅದ್ಯಾಕೋ ನಲುಗುತ್ತಿದೆ.
ಶಂಕರಪುರ ಮಲ್ಲಿಗೆ ಎಂದೇ ಹೆಸರುವಾಸಿಯಾದ ಈ ಮಲ್ಲಿಗೆಗೆ ಮಾಯಾನಗರಿ ಮುಂಬೈನಲ್ಲೂ ಭಾರೀ ಬೇಡಿಕೆ ಇದೆ. ಕರಾವಳಿಯ ಸಮಾರಂಭಗಳಲ್ಲಿ ಈ ಮಲ್ಲಿಗೆಯದ್ದೇ ಪಾರುಪತ್ಯ. ಮದುವೆ, ಭೂತಕೋಲ ಪ್ರತಿಯೊಂದಕ್ಕೂ ಈ ಮಲ್ಲಿಗೆಯ ಕಂಪು ಇಲ್ಲದಿದ್ದರೆ ಆ ಸಮಾರಂಭಕ್ಕೆ ಕಳೆನೇ ಬರಲ್ಲ. ಆದರೆ, ಈಗ ಶಂಕರಪುರ ಮಲ್ಲಿಗೆ ಬೆಳೆಗಾರರ ಮುಖದಲ್ಲಿ ಸಂಭ್ರಮವೇ ಇಲ್ಲದಂತಾಗಿದೆ.
ಕಳೆದ ನವೆಂಬರ್ ತಿಂಗಳಿನಲ್ಲಿ ಮಲ್ಲಿಗೆ ಅಟ್ಟೆಗೆ ದರ 1,250 ರೂಪಾಯಿ ತಲುಪಿತ್ತು. ಆದರೆ, ಈಗ ಅಟ್ಟೆಗೆ ದರ 130 ರೂಪಾಯಿಗೆ ಕುಸಿದಿದೆ. ಇದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.
ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ದರ ನಿಗದಿಯಾಗುವುದು ವಾಡಿಕೆ. ಆದರೆ, ತುಳುನಾಡಿನ ಕೆಲವೆಡೆ ಭೂತಾರಾಧನೆಯ ಕಾರ್ಯಕ್ರಮಗಳು ಮುಕ್ತಾಯದ ಹಂತದಲ್ಲಿದೆ. ಈ ಕಾರಣದಿಂದಲೇ ದರ ಇಳಿಕೆಯಾಗಿದೆ. ಇದರಿಂದ ಬೆಳೆಗಾರರ ಜೀವನ ದುಸ್ಥರವಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ಬರ ಆವರಿಸಿರುವುದೂ ಮಲ್ಲಿಗೆ ಬೆಳೆಗಾರರನ್ನು ಕಂಗಾಲಾಗಿಸಿದೆ.