ಉಡುಪಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಸೋಮವಾರ ಉಡುಪಿಯ ಅಂಬಲಪಾಡಿ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಭೇಟಿಗೆ ಒಂದು ಕಾರಣವೂ ಇತ್ತು.
ಪುತ್ರ ಉಮೇಶ್ ಜೊತೆಗೆ ತಿಮ್ಮಕ್ಕ ಅಂಬಲಪಾಡಿ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಹಸ್ಯವೊಂದು ಬಯಲಾಗಿದೆ. ಆ ಕಾರಣಕ್ಕಾಗಿಯೇ ತಿಮ್ಮಕ್ಕ ದೇವಿಯ ದರ್ಶನಕ್ಕೆ ಬಂದಿದ್ದರಂತೆ.
ಹೌದು, ಮೂರು ವರ್ಷಗಳ ಹಿಂದೆ ತಿಮ್ಮಕ್ಕ ಉಡುಪಿಯ ಅಂಬಲಪಾಡಿಯ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ರು. ಆವಾಗಿನ್ನೂ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿರಲಿಲ್ಲ. ತಿಮ್ಮಕ್ಕನ ಸಾಕು ಮಗನ ಮಸ್ಸಿನಲ್ಲಿ ಈ ಬಗ್ಗೆ ಖೇದವಿತ್ತು. ಎಂತೆಂಥವರಿಗೆಲ್ಲಾ ಪದ್ಮಶ್ರೀ ಪ್ರಶಸ್ತಿ ಬಂದಾಗಿತ್ತು. ತಿಮ್ಮಕ್ಕನಂತಹ ಹಿರಿಯ ಜೀವಕ್ಕೆ ಪ್ರಶಸ್ತಿ ಸಿಗೋದು ಯಾವಾಗ, ಅನ್ನೋ ನೋವು ಪುತ್ರ ಉಮೇಶ್ ಅವರಲ್ಲಿತ್ತು.
![thimmakka](https://etvbharatimages.akamaized.net/etvbharat/prod-images/4467967_mng.jpg)
ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯವರು ಅಂಬಲಪಾಡಿ ಮಹಾಕಾಳಿಗೆ ತೊಡಿಸಿದ ಸೀರೆಯನ್ನು ತಿಮ್ಮಕ್ಕನಿಗೆ ಪ್ರಸಾದವಾಗಿ ನೀಡಿದ್ರು. ಆವತ್ತೇ ಉಮೇಶ್ ಒಂದು ನಿರ್ಧಾರಕ್ಕೆ ಬಂದ್ರು. ಒಂದು ವೇಳೆ ಪದ್ಮಶ್ರೀ ಪ್ರಶಸ್ತಿ ಬಂದ್ರೆ ಅದೇ ಸೀರೆ ಉಡಿಸಿ ತಿಮ್ಮಕ್ಕನನ್ನು ಅಂಬಲಪಾಡಿ ಮಹಾಕಾಳಿಯ ದೇವಿಯ ದರ್ಶನಕ್ಕೆ ಕರೆತರೋದಾಗಿ ಮನಸಲ್ಲೇ ಹರಕೆ ಹೊತ್ತಿದ್ದರಂತೆ.
ಈ ಹರಕೆ ಹೊತ್ತ ಬಳಿಕ ಸಾಲುಮರದ ತಿಮ್ಮಕ್ಕನಿಗೆ ಪದ್ಮಶ್ರೀ ಪ್ರಶಸ್ತಿ ಒಲಿದು ಬಂತಂತೆ. ಹಾಗಾಗಿ ಸೋಮವಾರ ಉಡುಪಿ ಭೇಟಿಯ ಸಂದರ್ಭದಲ್ಲಿ ತಿಮ್ಮಕ್ಕನನ್ನು ಪುತ್ರ ಉಮೇಶ್ ದೇವಿಯ ದರ್ಶನಕ್ಕೆ ಕರೆತಂದಿದ್ದರು. ದೇವಿ ಸನ್ನಿಧಿಯಲ್ಲಿ ಹೊತ್ತಿದ್ದ ಹರಕೆ ತೀರಿಸಿ ತಾಯಿ ತಿಮ್ಮಕ್ಕ ಅವರೊಂದಿಗೆ ಪುತ್ರ ಉಮೇಶ್ ವಾಪಸಾದ್ರು. ಈ ವೇಳೆ ತಿಮ್ಮಕ್ಕನಿಗೆ ಪದ್ಮಶ್ರೀ ಸಿಕ್ಕಿದ್ದು ಹೇಗೆ ಎಂಬ ರಹಸ್ಯವನ್ನೂ ಅವರೇ ಹೇಳಿಕೊಂಡ್ರು.