ಉಡುಪಿ : ಸ್ಲಂ ಮಕ್ಕಳು ಅಂದ್ರೆ ಸಿರಿವಂತರಿಗೆ ಬಹಳ ತಾತ್ಸಾರ. ಆದರೆ ಉಡುಪಿಯ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬವೊಂದು ಕಳೆದ 14 ವರ್ಷಗಳಿಂದ ಸ್ಲಂ ಮಕ್ಕಳಿಗೆ ಉಚಿತ ಶಿಕ್ಷಣ, ಬಟ್ಟೆ ಬರೆ ನೀಡುವುದರ ಜೊತೆಗೆ ಅವರ ಆರೈಕೆ ಮಾಡುತ್ತಿದೆ. ಸದ್ಯ ಕೋವಿಡ್ ನಿಂದ ಶಾಲೆಗೆ ಹೋಗದ ಸ್ಲಂ ಮಕ್ಕಳಿಗೆ ಇವರ ಮನೆಯೇ ಪಾಠಶಾಲೆ.
ಈ ಮನೆ ನೋಡುತ್ತಿದ್ದರೆ ಮತ್ತೆ ಶಾಲೆ ಶುರವಾಯ್ತ ಅಂದಕೋಬಹುದು. ಆಟ, ಪಾಠ, ಊಟ, ಎಲ್ಲವೂ ಇಲ್ಲಿದೆ. ಎಲ್ಲವನ್ನು ಹೇಳಿಕೊಡೊಕೆ ಶಿಕ್ಷಕಿ ಕೂಡಾ ಇಲ್ಲಿದ್ದಾರೆ. ಆದ್ರೆ ಇದು ಸ್ಕೂಲ್ ಅಲ್ಲ, ಮನೆ ಪಾಠ. ಪಾಠ ಮಾಡ್ತಾ ಇರೋರು ರೂಪಾ ಬಲ್ಲಾಳ್. ವೃತ್ತಿಯಲ್ಲಿ ಯೋಗ ಥೆರಪಿಸ್ಟ್ ಆಗಿರೋ ಇವರದ್ದು ಅಪ್ಪಟ ಬ್ರಾಹ್ಮಣ ಕುಟುಂಬ. ಅಂದ ಹಾಗೆ ಕಳೆದ ಕೆಲವು ವರ್ಷಗಳಿಂದ ಇವರು ಸ್ಥಳೀಯವಾಗಿ ಬೀಡನಗುಡ್ಡೆಯಲ್ಲಿ ವಾಸವಾಗಿರೋ ಸ್ಲಂ ಕುಟುಂಬದ ಕೆಲವು ಮಕ್ಕಳನ್ನು ಮನೆಗೆ ಕರೆತಂದು ಮನೆಯಲ್ಲೇ ಪಾಠ ಮಾಡೋ ವ್ಯವಸ್ಥೆ ಮಾಡಿದ್ದಾರೆ. ಕಳೆದ 14 ವರ್ಷಗಳಿಂದ ಈ ಕೆಲಸವನ್ನು ರೂಪಾ ಬಲ್ಲಾಳ್ ಮತ್ತು ಅವರ ಕುಟುಂಬ ಮಾಡುತ್ತಿದೆ. 14 ವರ್ಷದ ಹಿಂದೆ ಸ್ಲಂ ಹುಡುಗಿಯೊಬ್ಬಳ ಕಷ್ಟ ಕಂಡು ಶುರುವಾದ ಇವರ ಉಚಿತ ಸೇವೆ ಈಗಲೂ ಮುಂದುವರಿದಿದೆ.
ಉಡುಪಿಯಲ್ಲಿ ವಿಜಯಪುರ, ಬಾಗಲಕೋಟೆ , ರಾಯಚೂರು, ಬಳ್ಳಾರಿ ಜಿಲ್ಲೆಯಿಂದ ಕೂಲಿ ಕಾರ್ಮಿಕರು ವಲಸೆ ಬಂದು ಜೀವನ ಕಟ್ಟಿಕೊಳ್ಳುತ್ತಾರೆ. ನಗರದ ವಿವಿಧ ಭಾಗದ ಕೊಳಗೇರಿಗಳಲ್ಲಿ ಇವರ ವಾಸ. ಇಲ್ಲಿನ ಮಕ್ಕಳು ಶಿಕ್ಷಣದಿಂದ ಬಹುತೇಕ ವಂಚಿತರಾಗಿದ್ದಾರೆ. ಕುಡಿತದ ಚಟ ಹೊಂದಿರುವ ಪೋಷಕರಿಂದ ಬಹುತೇಕ ಮಕ್ಕಳು ಲಾಲನೆ ಪಾಲನೆಯಿಂದ ವಂಚಿತರಾಗಿರ್ತಾರೆ. ಸಹಜವಾಗಿ ಇಂಥವರ ಕಷ್ಟ ಮನಗೊಂಡ ರೂಪಾ ಬಲ್ಲಾಳ್ ತನ್ನ ಗಂಡ ನಾಗಾರಾಜ್ ಮತ್ತು ಮಕ್ಕಳ ಸಹಕಾರದಿಂದ ಇಂತಹದ್ದೊಂದು ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದಾರೆ.
ಸದ್ಯ ಕೋವಿಡ್ ನಿಂದ ಶಾಲೆ ಬಂದ್ ಆಗಿದ್ದು, ಬೆಳಗ್ಗೆ 9 ರಿಂದ ಸಂಜೆ 6ರ ವರೆಗೂ ತಮ್ಮ ಮನೆಯಲ್ಲಿ ಮಕ್ಕಳಿಗೆ ಶಿಸ್ತು ಸಂಯಮದ ಪಾಠ ಮಾಡುತ್ತಾರೆ. ಮನೆಯ ತಾರಸಿಯ ಕಲಿಕಾ ಕೊಠಡಿಯಲ್ಲಿ ಖುದ್ದಾಗಿ ಕುತು ಪಾಠ ಹೇಳಿ, ಮಕ್ಕಳ ಹ್ಯಾಂಡ್ ರೈಟಿಂಗ್ ತಿದ್ದುತ್ತಾರೆ. ಕನ್ನಡ, ಇಂಗ್ಲಿಷ್, ಶಿಸ್ತಿನ ಪಾಠ, ಪ್ರಾರ್ಥನೆ ಇವೆಲ್ಲವನ್ನು ಹೇಳಿ ಕೊಟ್ಟು ಮಕ್ಕಳ ಜೊತೆ ಆತ್ಮೀಯತೆಯಿಂದ ಅಮ್ಮನಾಗಿ ಬೆರೆಯುತ್ತಾರೆ. ಅವರ ಕುಟುಂಬದ ಕಷ್ಟ, ಸುಖ ವಿಚಾರಿಸಿ ಮಕ್ಕಳ ಶಿಕ್ಷಣ ವೆಚ್ಚ ಇವರೇ ಭರಿಸುತ್ತಾರೆ. ಬಟ್ಟೆಯನ್ನೂ ಕೂಡಾ ಇವರೇ ಕೊಡಿಸುತ್ತಾರೆ. ಸ್ವತಃ ಕೂತು ಊಟ ಬಡಿಸ್ತಾರೆ.
ಮಕ್ಕಳ ಪ್ರತಿಭೆ ಗುರುತಿಸಿ ಭರತನಾಟ್ಯ ಡ್ಯಾನ್ಸ್, ಸ್ಕಿಪ್ಪಿಂಗ್, ಕರಾಟೆ ಎಲ್ಲವನ್ನೂ ಹೇಳಿಕೊಡುತ್ತಾರೆ. ಸ್ವಂತ ಖರ್ಚಿನಲ್ಲಿ ಕ್ಲಾಸ್ ಗೂ ಕೂಡಾ ಕಳಿಸುತ್ತಾರೆ. ಎಲ್ಲದರ ಖರ್ಚು ವೆಚ್ಚ ಭರಿಸೋ ರೂಪಾ ಮೇಡಂ ಅಂದ್ರೆ ಮಕ್ಕಳಿಗೂ ಅಚ್ಚು ಮೆಚ್ಚು, ಫ್ರೀ ಸಮ್ಮರ್ ಟೂರ್, ಹುಟ್ಟು ಹಬ್ಬ, ಹೊಸ ವರ್ಷಾಚರಣೆ ಹೀಗೆ ಎಲ್ಲದಕ್ಕೂ ಮಕ್ಕಳನ್ನು ಕರಕೊಂಡು ಹೋಗೋ ರೂಪಾ ಮೇಡಂ ಮಕ್ಕಳಿಗೆ ಪ್ರೀತಿಯ ಅಮ್ಮ.
ಹೀಗೆ ರೂಪಾ ಬಲ್ಲಾಳ್ ನೂರಾರು ಕೊಳಗೇರಿ ಮಕ್ಕಳನ್ನು ಸುಸಂಸ್ಕೃತರನ್ನಾಗಿ ರೂಪಿಸಲು ಶ್ರಮಿಸುತ್ತಿದ್ದಾರೆ. ರೂಪಾ ಅವರದ್ದು ಹೈಲಿ ಕ್ವಾಲಿಫೈಡ್ ಕುಟುಂಬವಾಗಿದ್ದು, ಇವರ ಇಬ್ಬರ ಮಕ್ಕಳು ವೈದ್ಯರು. ಒಬ್ಬರು ಆಮೆರಿಕಾದಲ್ಲಿದ್ದರೆ ಇನ್ನೊಬ್ಬರು ಮಣಿಪಾಲದಲ್ಲಿ ಎಂಡಿ ಆಗಿದ್ದಾರೆ. ಗಂಡ ನಾಗಾರಾಜ್ ಕೂಡಾ ಇಂಜಿನಿಯರ್ ಆಗಿದ್ದು, ಕೊಳೆಗೇರಿ ಹುಡಗನೊಬ್ಬ ಅವರ ಕಂಪನಿಯಲ್ಲಯೇ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಇನ್ನೊಬ್ಬ ಹುಡುಗ ರಾಷ್ಟ್ರೀಯ ಮಟ್ಟದ ಟ್ರಿಪಲ್ ಚೇಸ್ ನಲ್ಲಿ ಸಾಧನೆ ಮಾಡುತ್ತಿದ್ದಾನೆ. ಇವರು ಯಾವುದೇ ಪ್ರತಿಫಲ ಬಯಸದೇ ಕೊಳಗೇರಿ ಮಕ್ಕಳ ಆರೈಕೆಯಲ್ಲಿ ತೊಡಗಿರುವುದು ನಿಜಕ್ಕೂ ಶ್ಲಾಘನೀಯ.