ಉಡುಪಿ: ಮೂಢನಂಬಿಕೆಗೆ ಒಳಗಾಗಿರುವ ಹಳ್ಳಿ ಜನರನ್ನು ವಾಸ್ತವ ಪ್ರಪಂಚಕ್ಕೆ ಸೆಳೆಯುವ ವಿಶಿಷ್ಟ ಕಾರ್ಯಕ್ರಮವೊಂದು ಜಿಲ್ಲೆಯ ಶಂಕರಪುರ ಗ್ರಾಮದಲ್ಲಿ ನಡೆಯುತ್ತಿದೆ. ಇಲ್ಲಿ ಮೌಢ್ಯತೆ ಅಳಿಸಿ ನೈಜತೆ ತೋರಿಸುವ ಕಾರ್ಯವನ್ನು ರೋಟರಿ ಸಂಸ್ಥೆ ಮಾಡುತ್ತಿದೆ.
ಮಲ್ಲಿಗೆ ಕೃಷಿಗೆ ಹೆಸರುವಾಸಿಯಾಗಿರುವ ಶಂಕರಪುರದಲ್ಲಿ ರೋಟರಿ ಸಂಸ್ಥೆ, ಮೂಢನಂಬಿಕೆಯಿಂದ ದಾರಿ ತಪ್ಪುತ್ತಿರುವ ಜನರನ್ನು ವೈಜ್ಞಾನಿಕವಾಗಿ ಬದಲಾವಣೆ ಮಾಡುವ ಕೆಲಸಕ್ಕೆ ಕೈ ಹಾಕಿದೆ. ಸುಮಾರು 17 ವರ್ಷಗಳಿಂದ 200 ಮಾನಸಿಕ ಶಿಬಿರಗಳನ್ನು ಆಯೋಜನೆ ಮಾಡುತ್ತಾ, ಜನರನ್ನು ವೈಜ್ಞಾನಿಕವಾಗಿ ಗಟ್ಟಿ ಮಾಡುತ್ತಿದೆ.
ಮಾನಸಿಕ ಕಾಯಿಲೆ ಎಂಬುದು ಜನರಲ್ಲಿ ಕೀಳರಿಮೆ ಮೂಡಿಸುತ್ತೆ. ಗ್ರಾಮೀಣ ಪ್ರದೇಶದಲ್ಲಿರುವ ಜನರು ಮನೋರೋಗ ತಜ್ಞರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವುದು ಕಷ್ಟಕರ. ಆದ್ರೆ ರೋಟರಿ ಸಂಸ್ಥೆ ಮನೆಬಾಗಿಲಿಗೆ ಮನೋರೋಗ ತಜ್ಞರನ್ನು ಕರೆಸಿ ಪ್ರತಿ ತಿಂಗಳ ಮೊದಲ ರವಿವಾರ ಶಂಕರಪುರ ರೋಟರಿ ಸಂಸ್ಥೆಯಲ್ಲಿ ಶಿಬಿರವನ್ನು ಆಯೋಜನೆ ಮಾಡಲಾಗುತ್ತಿದೆ. ಶಂಕರಪುರ, ಪಡುಬೆಳ್ಳೆ, ಶಿರ್ವ, ಕಾಪು, ಉದ್ಯಾವರ ಈ ಪರಿಸರದ ಜನರು ಈ ಪ್ರಯೋಜನ ಪಡೆಯುತ್ತಿದ್ದಾರೆ.
ಮಾನಸಿಕ ಕಾಯಿಲೆ ಶಾಪವಲ್ಲ. ಅದನ್ನು ವೈಜ್ಞಾನಿಕವಾಗಿ ಚಿಕಿತ್ಸೆ ನೀಡಿ ಬಗೆಹರಿಸಿಕೊಳ್ಳಬಹುದು. ಗ್ರಾಮೀಣ ಜನರನ್ನು ಮೂಢನಂಬಿಕೆಯತ್ತ ಮುಖ ಮಾಡಿ ದಿಕ್ಕು ತಪ್ಪಿಸುವ ನಿರಂತರ ಕೆಲಸ ಆಗುತ್ತಿದೆ. ಇಂತಹ ವಿಷಯಗಳಲ್ಲಿ ಜನರು ಎಚ್ಚೆತ್ತುಕೊಂಡು ಶಿಬಿರಗಳಲ್ಲಿ ಭಾಗವಹಿಸಬೇಕು ಅಂತಾರೆ ಹಿರಿಯ ಮನೋರೋಗ ತಜ್ಞರಾದ ಡಾ. ಪಿ. ವಿ. ಭಂಡಾರಿ.