ಉಡುಪಿ: ನವಿಲು ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳ್‌ನಲ್ಲಿ ನಡೆದಿದೆ. ದ್ವಿಚಕ್ರವಾಹನ ಸವಾರ ಅಬ್ದುಲ್ಲಾ ಬೆಳಪು (24) ಮೃತಪಟ್ಟ ಯುವಕ. ಘಟನೆಯಲ್ಲಿ ಸಾವನ್ನಪ್ಪಿದ ಯುವಕ ಪಡುಬಿದ್ರೆಯ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಬೆಳಪುವಿನಲ್ಲಿ ವಾಸವಾಗಿದ್ದ ಅಬ್ದುಲ್ಲಾ ತಮ್ಮೂರಿನಿಂದ ಪಡುಬಿದ್ರಿಗೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದರು. ನವಿಲೊಂದು ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಹಾರಿದೆ. ಈ ವೇಳೆ ಅಬ್ದುಲಾ ಹಾರುತ್ತಿದ್ದ ನವಿಲಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಬೈಕ್ ನಿಯಂತ್ರಣ ಕಳೆದುಕೊಂಡು ಅಬ್ದುಲ್ಲಾ ನೆಲಕ್ಕುರಳಿದ್ದಾರೆ. ನೆಲಕ್ಕೆ ಬಿದ್ದ ರಭಸಕ್ಕೆ ಅಬ್ದಲ್ಲಾ ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದರು. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಬಕ್ರಿದ್ ಮುನ್ನ ದಿನವೇ ಅಬ್ದುಲ್ಲಾನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಹಬ್ಬದ ಮುನ್ನವೇ ಮನೆಯಲ್ಲಿ ಇಂತಹ ಘಟನೆ ನಡೆಯಿತ್ತಲ್ವಾ ಎಂಬ ಕೊರಗಿನಲ್ಲಿ ಅಬ್ದುಲ್ಲಾ ಪೋಷಕರು ಮತ್ತು ಸಂಬಂಧಿಕರು ಕೊರಗುತ್ತಿದ್ದಾರೆ.
ಅಪಘಾತದಲ್ಲಿ ನವಿಲು ಕೂಡಾ ಸ್ಥಳದಲ್ಲೇ ಸಾವನ್ನಪ್ಪಿದೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಶಿವಣ್ಣನ ಅಭಿಮಾನಿಗಳಿಗೆ ಸಿಹಿ ಸುದ್ದಿ.. ಭಜರಂಗಿ-2 ಸಿನಿಮಾ ರಿಲೀಸ್ ಡೇಟ್ ಫಿಕ್ಸ್..