ಉಡುಪಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತೆ. ಕೋರ್ಟ್ ತೀರ್ಪಿನ ಬಗ್ಗೆ ನೂರಕ್ಕೆ ನೂರು ನಮಗೆ ವಿಶ್ವಾಸ ಇದೆ. ಇದೀಗ ಸುಪ್ರೀಂಕೋರ್ಟ್ ಸರಿಯಾದ ವಿಚಾರಣೆ ನಡೆಸುತ್ತಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ರು.
ಇದೇ 13ರಂದು ದತ್ತಮಾಲಾ ಅಭಿಯಾನ ನಡೆಯುತ್ತೆ. ಉಡುಪಿಯಲ್ಲಿ 5 ಸಾವಿರ ಜನ ಮಾಲಾಧಾರಿಗಳು ಭಾಗವಹಿಸುವ ನಿರೀಕ್ಷೆ ಇದೆ. ಶೋಭಯಾತ್ರೆ, ಧರ್ಮಸಭೆ ನಡೆಯುತ್ತದೆ. ದತ್ತಹೋಮ, ಗಣಹೋಮ ಕಾರ್ಯಕ್ರಮ ಇರುತ್ತೆ. ಜಮ್ಮು-ಕಾಶ್ಮೀರದ ರಾಹುಲ್ ಕೌಲ್ ಭಾಗವಹಿಸುತ್ತಾರೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಪರ ಮುತಾಲಿಕ್ ಬ್ಯಾಟಿಂಗ್:
ನೆರೆ ಪರಿಹಾರಕ್ಕಾಗಿ ಕೇಂದ್ರದಿಂದ 1200 ಕೋಟಿ ಪರಿಹಾರ ಬಿಡುಗಡೆಯಾಗಿದ್ದು, ಅದು ಎಲ್ಲಿಗೂ ಸಾಕಾಗುವುದಿಲ್ಲ. ಆದರೆ ಮುಂದೆ ಒಳ್ಳೆಯದಾಗುತ್ತೆ ಎಂಬ ವಿಶ್ವಾಸವಿದೆ ಎಂದ್ರು. ಸಂಸದರ ಗೆಲುವಿನ ಹಿಂದೆ ಸೂಲಿಬೆಲೆ ಪರಿಶ್ರಮ ಇದೆ. ಚಕ್ರವರ್ತಿಗೆ ನೆರೆ ಪರಿಹಾರ ವಿಚಾರದಲ್ಲಿ ನೋವಿದೆ. ಅವರಿಗೆ ದೇಶದ್ರೋಹಿ ಪಟ್ಟ ಕಟ್ಟಿದ್ದು ಮೂರ್ಖತನ. ಚಕ್ರವರ್ತಿ ಸೂಲಿಬೆಲೆಯನ್ನು ನಾನು ಬೆಂಬಲಿಸುತ್ತೇನೆ. ವಾಗ್ಮಿ, ಚಿಂತಕ, ಪರಿಸರ ಪರ ಹೋರಾಟಗಾರನಿಗೆ ನೋವು ಕೊಡುವುದು ಸರಿಯಲ್ಲ ಎಂದು ಸೂಲಿಬೆಲೆ ಪರ ಬ್ಯಾಟಿಂಗ್ ಮಾಡಿದ್ರು.
ಇನ್ನು ದಸರಾ ವೇದಿಕೆಯಲ್ಲಿ ಚಂದನ್, ನಿವೇದಿತಾ ಪ್ರೇಮ ನಿವೇದನೆ ಕುರಿತು ಮಾತನಾಡಿದ ಮುತಾಲಿಕ್, ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರೇಮ ನಿವೇದನೆ ಮಾಡಬಾರದೆಂಬ ನಿಯಮ ಎಲ್ಲಿದೆ? ಅವರ ಮೇಲೆ ಕೇಸು ಹಾಕಿದ್ದು ತಪ್ಪು. ದಂಪತಿಯಾಗಲಿರುವ ಜೋಡಿಗೆ ಶುಭಾಶಯ ಹೇಳುತ್ತೇನೆ ಎಂದ್ರು. ಚಂದನ್ ಮತ್ತು ನಿವೇದಿತಾಗೆ ಸಮಸ್ಯೆಯಾಗಲ್ಲ. ಇಬ್ಬರ ಮೇಲೆ ಚಾಮುಂಡೇಶ್ವರಿ ಆಶೀರ್ವಾದ ಇದೆ ಎಂದ್ರು.