ಉಡುಪಿ: ಜಿಲ್ಲೆಯಲ್ಲಿ ಸದ್ಯ ಮಳೆಯ ಅಬ್ಬರ ಕೊಂಚ ತಣ್ಣಗಾಗಿದ್ದು ,ಕಳೆದ ಮೂರು ದಿನಗಳಿಂದ ಸುರಿದ ಭಾರಿ ಮಳೆಗೆ ಹಲವೆಡೆ ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ.
ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಕಂಬಗಳು ಮತ್ತು ಮರಗಳು ಉರುಳಿ ಬಿದ್ದ ಪರಿಣಾಮ ವಿದ್ಯುತ್ ವ್ಯತ್ಯಯವಾಗಿತ್ತು. ಈಗ ವಿದ್ಯುತ್ ಸಮಸ್ಯೆ ಸುಸ್ಥಿತಿಗೆ ಬರುತ್ತಿದ್ದು, ಭಾರೀ ಮಳೆಯಿಂದ ಮನೆಗಳಿಗೆ ಆದ ಹಾನಿಯನ್ನು ಸ್ಥಳೀಯ ತಹಶೀಲ್ದಾರರು ಪರಿಶೀಲನೆ ನಡೆಸುತ್ತಿದ್ದಾರೆ.
ರೆಡ್ ಅಲರ್ಟ್ ಇರುವುದರಿಂದ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ಇಂದಿನಿಂದ ರಜೆ ಘೋಷಿಸಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿದ್ದಾರೆ.
ಇನ್ನು ಕುಕ್ಕೆ ಹಳ್ಳಿ ಮಡಿ ಸೇತುವೆ ತುಂಬಿ ಹರಿಯುತ್ತಿದ್ದು, ಈ ಭಾಗದ ಜನರು ಮತ್ತು ವಾಹನ ಸವಾರರು ಪರದಾಡುವಂತಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆ ಹಲವೆಡೆ ಭಾರಿ ಹಾನಿಯುಂಟು ಮಾಡಿದೆ. ಮಳೆ ಹಾನಿ ಸಂಭವಿಸಿದ ಪ್ರದೇಶಕ್ಕೆ ಧಾವಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ, ಸ್ಥಳೀಯ ತಹಶೀಲ್ದಾರರು ಮತ್ತು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಮರಬಿದ್ದು ಮನೆಗೆ ಹಾನಿ:
ಜಿಲ್ಲೆಯ ಕಾಪುವಿನಲ್ಲಿ ಮನೆಯ ಮೇಲೆ ಮರ ಬಿದ್ದ ಪರಿಣಾಮ ಅಪಾರ ಹಾನಿ ಉಂಟಾಗಿದೆ. ರಾತ್ರಿ ಬೀಸಿದ ಗಾಳಿಗೆ ಕಾಪು ಎಲ್ಲಾರು ಜನಾರ್ಧನ ದೇವಸ್ಥಾನ ಬಳಿಯ ಲಲಿತ ಎಂಬವರ ಮನೆ ಮೇಲೆ ಮರ ಉರುಳಿ ಬಿದ್ದಿದೆ. ರಾತ್ರಿ ಹೊತ್ತು ನಿದ್ದೆಯಲ್ಲಿರುವ ಸಂದರ್ಭ ಮರ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಕಾಪು ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.