ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ನಾಲ್ಕನೇ ಪರ್ಯಾಯದ ಎಲ್ಲ ಸಾಂಪ್ರದಾಯಿಕ, ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಹದಿನಾಲ್ಕು ವರ್ಷದ ಹಿಂದೆ ತಮ್ಮ ಮೂರನೇ ಪರ್ಯಾಯದಂತೆ ಇಂದು ಬೆಳಗಿನ ಜಾವ ಪರ್ಯಾಯಕ್ಕೆ ಚಾಲನೆ ನೀಡಲಾಯಿತು.
ಮೊದಲು ನಡೆದ ಪರ್ಯಾಯ ಮೆರವಣಿಗೆಯಲ್ಲಿ ಪರ್ಯಾಯ ಪೀಠ ಏರುವ ಪುತ್ತಿಗೆ ಶ್ರೀ ಹಾಗೂ ಅವರ ಪಟ್ಟ ಶಿಷ್ಯ ಸುಶ್ರೀಂದ್ರ ತೀರ್ಥರು ಮಾತ್ರ ಪಾಲ್ಗೊಂಡಿದ್ದರು. ಮೆರವಣಿಗೆ ರಥಬೀದಿ ಮೂಲಕ ಶ್ರೀಕೃಷ್ಣ ಮಠ ಪ್ರವೇಶಿಸಿದ ಬಳಿಕದ ಎಲ್ಲ ಸಂಪ್ರದಾಯಗಳು ಉಳಿದ ಮಠಗಳ ಅನುಪಸ್ಥಿತಿಯಲ್ಲಿ ಜರುಗಿದವು.
ಎರಡು ವರ್ಷಗಳ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿ ಇಂದು ಪುತ್ತಿಗೆ ಶ್ರೀಗೆ ಅಧಿಕಾರ ಹಸ್ತಾಂತರಿಸಬೇಕಿದ್ದ ಕೃಷ್ಟಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ತಮಗೆ ಕಡ್ಡಾಯವಾಗಿದ್ದ ಯಾವ ವಿಧಿವಿಧಾನಗಳನ್ನೂ ನೆರವೇರಿಸದೇ ತಮ್ಮ ಮಠಕ್ಕೆ ಹಿಂದಿರುಗಿದ್ದರು. ಹೀಗಾಗಿ ಮಠಾಧೀಶರ ಅನುಪಸ್ಥಿತಿಯ ನಡುವೆ ಅದಮಾರು ಮಠದ ಹಿರಿಯ ಶ್ರೀಗಳಾದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಪುತ್ತಿಗೆ ಶ್ರೀಗೆ ಅಧಿಕಾರ ಹಸ್ತಾಂತರ ಮಾಡಿದರು.
ಕೃಷ್ಣಾಪುರ ಸ್ವಾಮೀಜಿ ಅನುಪಸ್ಥಿತಿಯಲ್ಲಿ ಪುತ್ತಿಗೆ ಶ್ರೀಗೆ ಸರ್ವಜ್ಞ ಪೀಠಾರೋಹಣವನ್ನೂ ಅದಮಾರು ಶ್ರೀಯವರೇ ಮಾಡಿಸಿದರು. ಈ ಎಲ್ಲ ಧಾರ್ಮಿಕ ವಿಧಿವಿಧಾನಗಳ ನಿರ್ವಹಣೆಯನ್ನು ಅದಮಾರು ವಿಶ್ವಪ್ರಿಯ ತೀರ್ಥರೇ ನೆರವೇರಿಸಿದರು. ಕೃಷಮಠದಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರಿಗೆ ಅಧಿಕಾರ ಹಸ್ತಾಂತರಿಸಿದ ಅದಮಾರು ಶ್ರೀ ಮಠದ ಕೀಲಿಕೈ, ಅಕ್ಷಯ ಪಾತ್ರೆ ಹಾಗೂ ಸೆಟ್ಟುಗ ಹಸ್ತಾಂತರ ಮಾಡಿದರು. ಈ ಎಲ್ಲ ಪೂಜಾಧಿಕಾರ ಹಸ್ತಾಂತರದ ನಂತರ ಅರಳು ಗದ್ದುಗೆಯಲ್ಲಿ ಖಾಸಗಿ ದರ್ಬಾರ್ ನಡೆಯಿತು.
ಖಾಸಗಿ ದರ್ಬಾರಿನ ಬಳಿಕ ಪುತ್ತಿಗೆ ಶ್ರೀಗಳಿಬ್ಬರು ರಾಜಾಂಗಣದಲ್ಲಿ ಸಾರ್ವಜನಿಕ ದರ್ಬಾರಿನಲ್ಲಿ ಭಾಗವಹಿಸಿದರು. ಪರ್ಯಾಯ ದರ್ಬಾರ್ನಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸಹಿತ ಹಲವು ಗಣ್ಯರು ಪಾಲ್ಗೊಂಡಿದ್ದರು. ಈ ಮೂಲಕ ಪರ್ಯಾಯ ಉತ್ಸವದಲ್ಲಿ ಪಾಲ್ಗೊಂಡು ಶ್ರೀಕೃಷ್ಣನ ಕೃಪೆಗೆ ಪಾತ್ರರಾದರು.
ಸಮಾರಂಭದಲ್ಲಿ ನಾಡಿನ ಮೂರು ವರ್ಷದ ತೆಲುಗು ಮೂಲದ ಅಮೆರಿಕದ ಬಾಲಕಿ ಕೋಕಿಲ ಸೇರಿದಂತೆ ನಾಡಿನ ಹಲವು ಹಿರಿಯ ವಿದ್ವಾಂಸರನ್ನು ದರ್ಬಾರ್ನಲ್ಲಿ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಪುತ್ತಿಗೆ ಶ್ರೀ ಸನ್ಮಾನಿಸಿದರು.
ಇದನ್ನೂ ಓದಿ: ಉಡುಪಿಯ ಸಾಂಸ್ಕೃತಿಕ ಶ್ರೀಮಂತಿಕೆ ವಿಶ್ವಕ್ಕೆ ಮಾದರಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್