ಉಡುಪಿ: ಜಿಲ್ಲೆಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಕೆಲಸ ಮಾಡುತ್ತಿದ್ದ 17 ಬಾಲ ಕಾರ್ಮಿಕರನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಕೊರೊನಾ ಕಾರಣದಿಂದಾಗಿ ಶಾಲೆಗಳು ತೆರೆದಿಲ್ಲ. ಹೀಗಾಗಿ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಹತ್ತರಿಂದ-ಹದಿನೈದು ವರ್ಷದ ಬಾಲ ಕಾರ್ಮಿಕರು ಮೀನು ತುಂಬಿದ ಬುಟ್ಟಿ ಹೋರುವುದು ಸೇರಿದಂತೆ ಅನೇಕ ಕೆಲಸಗಳಲ್ಲಿ ತೊಡಗಿದ್ದಾರೆ. ಈ ಮಾಹಿತಿ ತಿಳಿದ ಸಾಮಾಜಿಕ ಕಾರ್ಯಕರ್ತರು, ಪೊಲೀಸ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮಾರು ವೇಷದಲ್ಲಿ ತೆರಳಿ ರಕ್ಷಣೆ ಮಾಡಿದ್ದಾರೆ.
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಇಷ್ಟು ವರ್ಷ ಯಾವುದೇ ಬಾಲ ಕಾರ್ಮಿಕರಿರಲಿಲ್ಲ. ವಿದ್ಯಾಗಮ ಯೋಜನೆಯಡಿ ತರಗತಿಗಳು ನಡೆಯುತ್ತಿದ್ದಾಗ ಇಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮಲ್ಪೆ ಬಂದರಿನಲ್ಲಿ ದುಡಿಮೆಗಾಗಿ ಬರುತ್ತಿರಲಿಲ್ಲ. ವಿದ್ಯಾಗಮ ನಿಲ್ಲಿಸಿದ್ದರಿಂದ ಪುಸ್ತಕ ಹಿಡಿಯುವ ಕೈಗಳು ಬುಟ್ಟಿ ಹಿಡಿಯುವಂತಾಗಿವೆ ಎನ್ನುವ ಮಾತುಗಳು ಕೇಳಿ ಬಂದಿವೆ.