ಉಡುಪಿ: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯುವ ನವರಾತ್ರಿ ಉತ್ಸವಕ್ಕಾಗಿ ದೇಗುಲದ ಆಡಳಿತ ಮಂಡಳಿ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಕೊರೊನಾ ಕಾರಣದಿಂದಾಗಿ ಸರಳವಾಗಿ ಹಬ್ಬದ ಆಚರಣೆ ನಡೆಯಲಿದೆ.
ಅ.17 ರಿಂದ ಪ್ರಾರಂಭಗೊಳ್ಳುವ ನವರಾತ್ರಿಯ ಉತ್ಸವದ ಆಚರಣೆಗಳು ಅ.25ರವರೆಗೂ ನಡೆಯಲಿದೆ. ನವರಾತ್ರಿಯ ಅಂಗವಾಗಿ ದೇವಸ್ಥಾನದಲ್ಲಿ ದಿನಂಪ್ರತಿ ನಡೆಯುವ ಕಟ್ಟಕಟ್ಟಳೆ ಪೂಜೆಗಳ ಜತೆಯಲ್ಲಿ ನವರಾತ್ರಿಯ ವಿಶೇಷ ಪೂಜೆ ಹಾಗೂ ಉತ್ಸವಗಳು ನಡೆಯಲಿದೆ.
ಅ.24 ರಂದು ಸೋಮವಾರ ಮಹಾನವಮಿಯ ಪ್ರಯುಕ್ತ ಬೆಳಿಗ್ಗೆ 11.30ಕ್ಕೆ ಚಂಡಿಕಾಯಾಗ ಹಾಗೂ ರಾತ್ರಿ 10.30ಕ್ಕೆ ರಥೋತ್ಸವ ಜರುಗಲಿದೆ. ಅ.25 ರಂದು ಭಾನುವಾರ ವಿಜಯದಶಮಿಯ ಪ್ರಯುಕ್ತ ಬೆಳಿಗ್ಗೆ ವಿದ್ಯಾರಂಭ, ನವಾನ್ನ ಪ್ರಾಶನ ಹಾಗೂ ಶ್ರೀ ಮೂಕಾಂಬಿಕಾ ದೇವಿಯ ವಿಜಯೋತ್ಸವ ನಡೆಯಲಿದೆ. ಕ್ಷೇತ್ರಕ್ಕಾಗಮಿಸುವ ಭಕ್ತರಿಗೆ ಯಾವುದೆ ತೊಂದರೆಯಾಗದಂತೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಭಕ್ತರಿಗೆ ಎಲ್ಲ ರೀತಿಯ ಸೇವೆಗಳಿಗೂ ಅವಕಾಶ ನೀಡಲಾಗಿದೆ. ಅ.24ರಂದು ರಾತ್ರಿ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯುವ ಶ್ರೀದೇವಿಯ ವೈಭವದ ಪುಷ್ಪ ರಥೋತ್ಸವದಲ್ಲಿ ಪಾಲ್ಗೊಳ್ಳಲು ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ. ಈ ಉತ್ಸವದಲ್ಲಿ ರಾಜ್ಯ ಹಾಗೂ ಹೊರ ರಾಜ್ಯದಿಂದ ಬರುವ ಸಾವಿರಾರು ಭಕ್ತರು ಸೇರುವುದರಿಂದ, ಪರಸ್ಪರ ಅಂತರ ಪಾಲನೆ ಕಷ್ಟವಾಗಿರುತ್ತದೆ. ಹೀಗಾಗಿ ಆ ದಿನ ಸಂಜೆ 5 ಗಂಟೆಯ ಬಳಿಕ ಭಕ್ತರಿಗೆ ದೇವಸ್ಥಾನ ಪ್ರವೇಶವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.
ನವರಾತ್ರಿ ಸಂಭ್ರಮದ ಅಂಗವಾಗಿ ಪ್ರತಿ ವರುಷದಂತೆ ದೇವಸ್ಥಾನಕ್ಕೆ ವಿದ್ಯುತ್ ದೀಪ ಹಾಗೂ ಹೂವಿನ ಅಲಂಕಾರ ಮಾಡದೆ ಇದ್ದರೂ ಪರಂಪರೆಗೆ ಅನುಗುಣವಾಗಿ ಸರಳ ರೀತಿಯಲ್ಲಿ ಉತ್ಸವದ ಅಲಂಕಾರ ಮಾಡಲಾಗುತ್ತದೆ.