ಉಡುಪಿ: ಕೈ ಪಕ್ಷದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಜೆಡಿಎಸ್ ಅಭ್ಯರ್ಥಿಯಾಗಿ ಬಿ ಫಾರ್ಮ್ ಪಡೆದ ಬಳಿಕ ಉಡುಪಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮೊದಲ ಬಾರಿಗೆ ಆಗಮಿಸಿದ್ರು.
ದೇವೆಗೌಡರಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮೈತ್ರಿ ಟಿಕೆಟ್ ಪಡೆದು ತವರಿಗೆ ಆಗಮಿಸಿದ ಮಧ್ವರಾಜ್ ಮನೆಗೆ ತೆರಳುವ ಮೊದಲು ತೆನೆ ಹೊತ್ತ ಮಹಿಳೆ ಹಾಗೂ ಕೈ ಚಿಹ್ನೆ ಜೊತೆಯಾಗಿ ಮುದ್ರಿಸಿರುವ ವಿಭಿನ್ನ ಶಾಲನ್ನ ಧರಿಸಿ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಚಿಹ್ನೆಯುಳ್ಳ ಶಾಲು ಈವರೆಗೆ ಯಾರೂ ತಯಾರು ಮಾಡಿಲ್ಲ. ಈ ಶಾಲನ್ನು 18ರವರೆಗೆ ತೊಟ್ಟಿರುತ್ತೇನೆ. ಚಿಹ್ನೆಯ ಬಗ್ಗೆ ಜನರಿಗೆ ಉತ್ತರ ಕೊಟ್ಟು ಸುಸ್ತಾಯ್ತು. ಇನ್ನು ಮುಂದೆ ಉಡುಪಿಯಲ್ಲಿ ಕಾಂಗ್ರೆಸ್- ಜೆಡಿಎಸ್ ಹಾಲು ಜೇನಿನಂತೆ ಬೆರೆಯಲಿವೆ. ನಾನು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಮೈತ್ರಿ ಧರ್ಮದಂತೆ ಜೆಡಿಎಸ್ ಅಭ್ಯರ್ಥಿಯಾಗಿ ಕಾಂಗ್ರೆಸ್ ಪರವಾಗಿ ಸ್ಪರ್ಧಿಸುತ್ತೇನೆ ಎಂದರು.
ಹಾಗೇ ಕೆಲಸ ಮಾಡುವ ಸಂಸದರನ್ನು ಆಯ್ಕೆ ಮಾಡಿ. ಇಡೀ ದೇಶದಲ್ಲಿ ಪ್ರಥಮ ಬಾರಿಗೆ ಮೈತ್ರಿ ಅಭ್ಯರ್ಥಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಮಾರ್ಚ್ 25ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ಎರಡು ದಿನದಲ್ಲಿ ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಪ್ರವಾಸ ಮಾಡುತ್ತೇನೆ. ಕಾಂಗ್ರೆಸ್ ಪಕ್ಷ ಉಳಿಸಲು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಗೆದ್ದು ಬಂದರೆ ರಾಜಧರ್ಮ ಪಾಲಿಸುತ್ತೇನೆ ಎಂದರು.