ಉಡುಪಿ: ಮಲ್ಪೆ ಬಂದರಿನಿಂದ ಏಳು ಮಂದಿ ಮೀನುಗಾರರು ಬೋಟ್ ಸಮೇತ ನಾಪತ್ತೆಯಾಗಿ ನಾಲ್ಕೂವರೆ ತಿಂಗಳು ಕಳೆದ ಬಳಿಕ ಬೋಟ್ನ ಅವಶೇಷಗಳು ಮೊನ್ನೆ ಪತ್ತೆಯಾಗಿವೆ. ಮೀನುಗಾರರು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಹಲವು ಮಾಹಿತಿಗಳನ್ನು ಮುಚ್ಚಿಟ್ಟಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬೋಟ್ ನಾಪತ್ತೆಯಾಗಿದ್ದು ಡಿಸೆಂಬರ್ 15 ರಂದು. ಆದರೆ, ಡಿಸೆಂಬರ್ 21ನೇ ತಾರೀಕಿನಂದೇ ನೌಕಾಸೇನೆಗೆ ಸೇರಿದ ಐಎನ್ಎಸ್ ಕೊಚ್ಚಿನ್ ನೌಕೆ ಮೀನುಗಾರರಿದ್ದ ಸುವರ್ಣ ತ್ರಿಭುಜ ಬೋಟ್ಗೆ ಡಿಕ್ಕಿ ಹೊಡೆದಿದೆ. ಆದರೆ, ಡಿಕ್ಕಿ ಹೊಡೆದ ವಿಷಯವನ್ನು ನೌಕಾಸೇನೆ ನಾಲ್ಕು ತಿಂಗಳ ತನಕ ಮುಚ್ಚಿಟ್ಟಿದೆ. ಮೊನ್ನೆ ಚುನಾವಣೆ ಮುಗಿದ ಬಳಿಕ ಬೋಟ್ನ ಅವಶೇಷ ಸಿಕ್ಕಿರುವ ಬಗ್ಗೆ ನಾಟಕವಾಡುತ್ತಿದೆ ಎಂದರು.
ಉಡುಪಿ ಶಾಸಕರು ಐದು ದಿನಗಳ ಹಿಂದೆ ಮೀನುಗಾರರ ಕುಟುಂಬದವರ ಜೊತೆ ಸೇರಿ ಬೋಟ್ ಹುಡುಕಾಟ ಮಾಡುವ ನಾಟಕ ಮಾಡಿದ್ದಾರೆ. ಶಾಸಕರು ಹೋದ ಎರಡೇ ದಿನದಲ್ಲಿ ಬೋಟ್ನ ಅವಶೇಷ ಸಿಕ್ಕಿದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಪ್ರಮೋದ್, ಚುನಾವಣೆ ಮುಗಿಯುವ ತನಕ ಕೇಂದ್ರ ಸರ್ಕಾರ ಡಿಕ್ಕಿಯಾದ ವಿಷಯವನ್ನು ಮುಚ್ಚಿಟ್ಟಿತ್ತು. ಈ ಸಂಬಂಧ ತಮ್ಮ ಬಳಿ ದಾಖಲೆಗಳಿವೆ ಎಂದರು. ಹೀಗಾಗಿ ಕೇಂದ್ರ ಸರ್ಕಾರ ಮೃತ ಮೀನುಗಾರರ ಕುಟುಂಬಗಳಿಗೆ ತಲಾ ಇಪ್ಪತ್ತೈದು ಲಕ್ಷ ರೂ. ಪರಿಹಾರ ನೀಡಬೇಕು. ಜೊತೆಗೆ ಅಪಘಾತಕ್ಕೀಡಾದ ಸುವರ್ಣ ತ್ರಿಭುಜ ಬೋಟ್ಗೂ ಸಂಪೂರ್ಣ ಪರಿಹಾರ ನೀಡಬೇಕು. ಇದು ತಪ್ಪಿದ್ದಲ್ಲಿ ಸುಪ್ರೀಂಕೋರ್ಟ್ ಕದ ತಟ್ಟುವುದಾಗಿ ಹೇಳಿದ್ದಾರೆ.
ಉಡುಪಿ ಶಾಸಕರು, ಸಂಸದೆ ಶೋಭಾ ಕರಂದ್ಲಾಜೆ ಮತ್ತು ರಕ್ಷಣಾ ಸಚಿವೆ ಸೇರಿ ಚುನಾವಣೆ ಲಾಭಕ್ಕಾಗಿ ಮೀನುಗಾರರ ಜೀವದ ಜೊತೆ ಚೆಲ್ಲಾಟ ಆಡಿದ್ದಾರೆ. ಮೀನುಗಾರರ ಸಮುದಾಯದವನಾಗಿ ನಾನು ಮೀನುಗಾರರ ಪರವಾಗಿ ಧ್ವನಿ ಎತ್ತುತ್ತೇನೆ. ಜೊತೆಗೆ ಮುಖ್ಯಮಂತ್ರಿ, ರಾಷ್ಟ್ರಪತಿ ಮತ್ತು ರಕ್ಷಣಾ ಸಚಿವರಿಗೆ ಶೀಘ್ರ ಪತ್ರ ಬರೆಯುವುದಾಗಿಯೂ ಪ್ರಮೋದ್ ತಿಳಿಸಿದ್ದಾರೆ.