ಉಡುಪಿ: ಜಿಲ್ಲೆಯಾದ್ಯಂತ ಮುಂಗಾರು ಮಳೆ ದುರ್ಬಲಗೊಂಡಿದ್ದು, ಸತತ ನಾಲ್ಕನೇ ದಿನವೂ ವಾತಾವರಣ ಬಿಸಿಲಿನಿಂದ ಕೂಡಿದೆ.
ವಾರದ ಹಿಂದೆ ಕೇರಳಕ್ಕೆ ಅಪ್ಪಳಿಸಿದ್ದ ಮುಂಗಾರು ಮಳೆ ಕರ್ನಾಟಕ ಕರಾವಳಿಯನ್ನೂ ಪ್ರಭಾವಿಸಿತ್ತು. ಹೀಗಾಗಿ ಸತತ ಎರಡು ದಿನಗಳ ಕಾಲ ಉಡುಪಿ ಜಿಲ್ಲೆಯಾದ್ಯಂತ ಮಳೆ ಸುರಿದಿತ್ತು. ಬಿಸಿಲ ಬೇಗೆಯ ಜೊತೆಗೆ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಕೃಷ್ಣ ನಗರಿಯ ಜನತೆ ಬಹಳ ಖುಷಿಪಟ್ಟಿದ್ದರು. ಆದ್ರೆ ಈ ಖುಷಿ ಇದ್ದದ್ದು ಎರಡೇ ದಿನ.
ಈಗ ಸತತ ನಾಲ್ಕು ದಿನಗಳಿಂದ ಉಡುಪಿ ಜಿಲ್ಲೆಯಾದ್ಯಂತ ಬಿಸಿಲಿದೆ. ಜನ ಮಳೆಗಾಗಿ ಆಕಾಶ ನೋಡುತ್ತಿದ್ದಾರೆ. ಸಾಮಾನ್ಯವಾಗಿ ಜೂನ್ 17ರ ಹೊತ್ತಿಗೆ ಕರಾವಳಿಯಲ್ಲಿ ಹಳ್ಳ-ಕೊಳ್ಳ, ನದಿಗಳೆಲ್ಲ ತುಂಬಿ ಹರಿಯುತ್ತವೆ. ಆದರೆ, ಈ ಬಾರಿ ಪೂರ್ಣ ಪ್ರಮಾಣದ ಮುಂಗಾರು ಮಳೆಯೇ ಇನ್ನೂ ಪ್ರವೇಶವಾಗಿಲ್ಲ. ಒಂದು ಕ್ಷಣ ಮೋಡ ಕವಿದ ವಾತಾವರಣವಿದ್ದರೆ, ಮರುಕ್ಷಣವೇ ಬಿಸಿಲು ಬರುತ್ತದೆ. ಹೀಗಾಗಿ ನಗರವಾಸಿಗಳ ಕುಡಿಯುವ ನೀರಿನ ಅಭಾವ ಈಗಲೂ ಮುಂದುವರೆದಿದೆ. ಹಾಗಾಗಿ ಉಡುಪಿಗೂ ಈ ಬಾರಿ ಬರದ ಛಾಯೆ ತಟ್ಟಲಿದೆ ಅನ್ನುತ್ತಿದ್ದಾರೆ ಇಲ್ಲಿನ ಜನ.